ಮೈಸೂರು

ಇಂದು ಎಲ್ಲವೂ ವಿಷಯುಕ್ತ ಆಹಾರ, ಮೀನು ಮಾತ್ರ ವಿಷರಹಿತ ಆಹಾರ : ಹೆಚ್.ವಿ.ರಾಜೀವ್ ಅಭಿಮತ

ಇತ್ತೀಚಿನ ದಿನಗಳಲ್ಲಿ ತರಕಾರಿ ಸೇರಿದಂತೆ ಎಲ್ಲಾ ಪದಾರ್ಥಗಳು ವಿಷಯುಕ್ತವಾಗಿದ್ದು, ಮೀನು ಮಾತ್ರ ಅತ್ಯಂತ ಗುಣಮಟ್ಟದ ವಿಷರಹಿತ ಆಹಾರ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್ ಅಭಿಪ್ರಾಯಪಟ್ಟರು.

ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ ಹಾಗೂ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗದ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ  ಹೆಚ್.ವಿ. ರಾಜೀವ್ ಮಾತನಾಡಿದರು. ಆಧುನಿಕತೆ ಬೆಳೆದಂತೆ ತಿನ್ನುವ ಅನ್ನ ಸೇರಿದಂತೆ ಎಲ್ಲಾ ರೀತಿಯ ತರಕಾರಿಗಳು ವಿಷಯುಕ್ತವಾಗಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ಹೆಚ್ಚೆಚ್ಚು ರಾಸಾಯನಿಕ ಪದಾರ್ಥಗಳನ್ನು ಬಳಸುತ್ತಿದ್ದಾರೆ. ಇದರಿಂದ ನಾವು ತಿನ್ನುವ ಆಹಾರ ಪದಾರ್ಥಗಳು ಅಪಾಯಕಾರಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮೀನು ಆಹಾರ ಕ್ರಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮೀನುಗಾರಿಕೆ ಸಮುದ್ರದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆದರೆ, ಒಳನಾಡಿನಲ್ಲಿ ಅಲ್ಲಿಯ ವಾತಾವರಣಕ್ಕೆ ತಕ್ಕಂತೆ ನಡೆಯುತ್ತಿದೆ. ರಾಜ್ಯದ ಮೀನುಗಾರರ ಮಹಾಮಂಡಳ ಮೀನನ್ನೇ ನಂಬಿರುವವರ ಬದುಕನ್ನು ಹಸನುಗೊಳಿಸಲು ಶ್ರಮಿಸುತ್ತಿದೆ. ಹೈನುಗಾರಿಕೆಯ ನಂತರ ಮೀನುಗಾರಿಕೆ ಅತ್ಯಂತ ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದು, ಗುಣಮಟ್ಟದೊಂದಿಗೆ ಆರೋಗ್ಯಕರ ಸ್ಪರ್ಧೆಯನ್ನು ಸಹ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಮೀನುಗಾರರಿಗೆ ಹೆಚ್ಚಿನ ಪ್ರೋತ್ಸಾಹ ದೊರೆತರೆ ಮಾತ್ರ ಗ್ರಾಮೀಣ ಮಟ್ಟದಲ್ಲಿ ದೊಡ್ಡ ಬದಲಾವಣೆಯಾಗಲು ಸಾಧ್ಯ. ಮೀನುಗಾರರು ಕೇವಲ ಮಾರಾಟದ ಬಗ್ಗೆ ತಿಳಿದುಕೊಂಡರೆ ಸಾಲದು ಕಾನೂನಾತ್ಮಕ ಅಂಶಗಳನ್ನೂ ತಿಳಿದುಕೊಳ್ಳಬೇಕು. ಆಗ ಮಾತ್ರ ಸಮಾಜಕ್ಕೆ ಗುಣಮಟ್ಟದ ಆಹಾರವನ್ನು ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಆಯೋಜಿಸಿರುವ ತರಬೇತಿ ಕಾರ್ಯಕ್ರಮವನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳದ ಅಧ್ಯಕ್ಷ ಮಾದೇಗೌಡ ಮಾತನಾಡಿ, ಸಹಕಾರ ಸಚಿವರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಋಣ ನಮ್ಮ ಮಹಾಮಂಡಳದ ಮೇಲಿದೆ. ಸುಮಾರು 4 ಕೋಟಿಗೂ ಅಧಿಕ ಸಾಲವನ್ನು ಮನ್ನಾ ಮಾಡಿದ್ದಾರೆ. ಇಂದು ಮಹಾಮಂಡಳ ಋಣಮುಕ್ತವಾಗಿದೆ ಎಂದರೆ ಅದಕ್ಕೆ ಕಾರಣ ಮಹದೇವಪ್ರಸಾದ್. ಜತೆಗೆ ರಾಜ್ಯದ ಮಹಾಮಂಡಳ ರಾಷ್ಟ್ರಕ್ಕೇ ಮಾದರಿಯಾಗಿದೆ. ಆದರೆ, ವಿಪರ್ಯಾಸವೆಂದರೆ ನಮ್ಮ ಮಹಾಮಂಡಳ ಈಗಲೂ ಹಿಂದುಳಿದಿದೆ. ಸಂಘದ ಸದಸ್ಯರಿಗೆ ಪತ್ರ ಬರೆದರೆ ಅದಕ್ಕೆ ಉತ್ತರಿಸುವ ಶಕ್ತಿಯೂ ಅವರಿಗಿಲ್ಲ. ಸರಿಯಾಗಿ ದಾಖಲೆಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಇದರಿಂದ 16 ಸೊಸೈಟಿಗಳು ಡಿಫಂಡ್ ಆಗಿವೆ. ಮಹಾಮಂಡಳ ಕಳೆದ 15-20 ವರ್ಷಗಳಲ್ಲಿ ನಷ್ಟದಲ್ಲಿ ನಡೆಯುತ್ತಿದೆ. ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎಸ್.ಚಂದ್ರಶೇಖರ್, ಮೀನುಗಾರಿಕಾ ನಿರ್ದೇಶನಾಲಯದ ಉಪನಿರ್ದೇಶಕ ರಾಮಕೃಷ್ಣ, ಸಾರ್ವಜನಿಕ ಸಂಪರ್ಕಾಧಿಕಾರಿ ಹೆಚ್.ಎಸ್.ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: