ಪ್ರಮುಖ ಸುದ್ದಿ

ವಕ್ಫ್ ಸಲಹಾ ಸಮಿತಿ ಸಭೆ : ಜಮಾಅತ್‍ಗಳ ನೋಂದಾಣಿ ಕಡ್ಡಾಯ : ಕೆ.ಎ.ಯಾಕುಬ್ ಮನವಿ

ರಾಜ್ಯ( ಮಡಿಕೇರಿ) ಜೂ.19 : -ಜಿಲ್ಲೆಯಲ್ಲಿರುವ ಮಸೀದಿಗಳ ಅಭಿವೃದ್ಧಿಗಾಗಿ ಎಲ್ಲಾ ಜಮಾಅತ್‍ಗಳು ಕಡ್ಡಾಯವಾಗಿ ವಕ್ಫ್ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ವಕ್ಫ್ ಸಲಹಾ ಸಮಿತಿ ಮನವಿ ಮಾಡಿದೆ.
ಕೊಡಗು ಜಿಲ್ಲಾ ವಕ್ಫ್ ಕಛೇರಿಯಲ್ಲಿ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ.ಎ.ಯಾಕುಬ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೆ.ಎ.ಯಾಕುಬ್, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮೊದಲನೇ ಸಭೆ ಇದಾಗಿದ್ದು ಹಲವಾರು ಮಹತ್ವದ ತೀರ್ಮಾನಗಳನ್ನು ಸದಸ್ಯರ ಸಮ್ಮುಖದಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ಮಸೀದಿಗಳಿದ್ದರೂ 148 ಮಸೀದಿಗಳು ಮಾತ್ರ ವಕ್ಫ್ ಇಲಾಖೆಯಲ್ಲಿ ನೋಂದಾವಣಿ ಮಾಡಿಕೊಂಡಿವೆ. ಆದ್ದರಿಂದ ಜಿಲ್ಲೆಯಲ್ಲಿರುವ ಎಲ್ಲಾ ಮಸೀದಿಗಳು ಕಡ್ಡಾಯವಾಗಿ ವಕ್ಫ್ ಇಲಾಖೆಯಲ್ಲಿ ನೋಂದಾಣಿ ಮಾಡಿಸಿಕೊಂಡು ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿರುವ ಜಮಾಅತ್‍ಗಳು 3 ವರ್ಷಕ್ಕೊಮ್ಮೆ ಮಹಾಸಭೆಗಳನ್ನು ನಡೆಸಬೇಕು. ಆದರೆ ಕೆಲವೊಂದು ಜಮಾಅತ್‍ಗಳು ಮಹಾಸಭೆಯನ್ನು ನಡೆಸಿಲ್ಲದಿರುವುದು ವಕ್ಫ್ ಸಲಹಾ ಸಮಿತಿಯ ಗಮನಕ್ಕೆ ಬಂದಿದ್ದು, ಸಭೆ ನಡೆಸದೇ ಇರುವ ಜಮಾಅತ್‍ಗಳಿಗೆ ಸಭೆ ನಡೆಸುವಂತೆ ಸೂಚಿಸಲಾಗುವುದು ಎಂದರು.
ಸೋಮವಾರಪೇಟೆಯ ರೇಂಜರ್ ಬ್ಲಾಕ್‍ನಲ್ಲಿ ಜಾಮೀಯಾ ಮಸೀದಿಯ ಅಧೀನದಲ್ಲಿದ್ದ ವಕ್ಫ್ ಆಸ್ತಿ ಒತ್ತುವರಿಯಾಗಿತ್ತು. ಇದೀಗ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಸಿ ವಕ್ಫ್ ಆಸ್ತಿಯನ್ನು ಗುರುತಿಸಿ ನೀಡಿದ್ದಾರೆ. ಆ ಪ್ರದೇಶದಲ್ಲಿ ವಕ್ಫ್ ಇಲಾಖೆಯ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಮಡಿಕೇರಿ ನಗರದ ಜಾಮೀಯಾ ಮಸೀದಿಗೆ ಒಳಪಟ್ಟ ಮುಸಲ್ಮಾನರ ಸ್ಮಶಾನ ಕಳೆದ ವರ್ಷ ಉಂಟಾದ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿದೆ. ತಡೆಗೋಡೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಕ್ಫ್ ಖಾತೆ ಸಚಿವರ ಬಳಿ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ಯಾಕುಬ್ ತಿಳಿಸಿದರು.
ಮದರಸ ಹಾಗೂ ಜಮಾಅತ್‍ಗಳಿಗೆ ಅಲ್ಪಸಂಖ್ಯಾತರ ಸೌಲಭ್ಯಗಳ ಕುರಿತು ಮಾಹಿತಿಯ ಕೊರತೆ ಇರುವುದರಿಂದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಸುಂಟಿಕೊಪ್ಪ ಮತ್ತು ವಿರಾಜಪೇಟೆಯಲ್ಲಿ ಸಭೆ ನಡೆಸಿ ಮಾಹಿತಿ ನೀಡಲಾಗುವುದು.
ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳ ಕುರಿತು ತಿಳಿಸುವ ನಿಟ್ಟಿನಲ್ಲಿ ಸಚಿವರ ಸಮ್ಮುಖದಲ್ಲಿ ಬೃಹತ್ ಕಾರ್ಯಾಗಾರವನ್ನು ಆಗಸ್ಟ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಜಿಲ್ಲೆಯ ಎಲ್ಲಾ ಜಮಾಅತ್‍ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರುಗಳಾದ ಅಬ್ದುಲ್ ಖಾದರ್, ಅಬ್ದುಲ್ ರೆಹಮಾನ್ ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: