ಮೈಸೂರು

ಗ್ರೀನ್ ಬಡ್ಸ್ ಅಗ್ರೋ ಫಾರಂ ಲಿಮಿಟೆಡ್ ಕಂಪನಿಯಿಂದ ವಂಚನೆಗೆ ಒಳಗಾದ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ತುರ್ತು ಕ್ರಮಕ್ಕೆ ಒತ್ತಾಯಿಸಿ ಕಂದಾಯ ಸಚಿವರಿಗೆ ಮನವಿ

ಮೈಸೂರು,ಜೂ.20:- ಗ್ರೀನ್ ಬಡ್ಸ್ ಅಗ್ರೋ ಫಾರಂ ಲಿಮಿಟೆಡ್ ಕಂಪನಿಯಿಂದ ವಂಚನೆಗೆ ಒಳಗಾದ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ತುರ್ತು ಕ್ರಮಕ್ಕೆ ಒತ್ತಾಯಿಸಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಗ್ರೀನ್ ಬಡ್ಸ್ ಕಾರ್ಯಕರ್ತರು ಹಾಗೂ ಠೇವಣಿದಾರರ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷೆ ಜಿ.ವಿ.ಲಕ್ಷ್ಮಿದೇವಿ ಮನವಿ ಸಲ್ಲಿಸಿದರು.

ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಒಮದು ಲಕ್ಷದ ಎಪ್ಪತ್ತು ಸಾವಿರ ಠೇವಣಿದಾರರು ಗ್ರೀನ್ ಬಡ್ಸ್ ಅಗ್ರೋ ಫಾರಂ ಕಂಪನಿಗೆ 2012-13ನೇ ಸಾಲಿನವರೆಗೆ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸಿಐಡಿ ತನಿಖೆ ನಡೆದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ನ್ಯಾಯಾಲಯ ಈ ಸಂಸ್ಥೆಯ ಆಸ್ತಿ ಪಾಸ್ತಿಗಳನ್ನು ಹರಾಜು ಮಾಡಿ ಠೇವಣಿದಾರರಿಗೆ ಹಣ ವಾಪಸ್ ಕೊಡಲು ಬೇಕಾಗಿರುವ ವರದಿಯನ್ನು ಮೈಸೂರು ವಿಭಾಗದ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಯನ್ನು ನ್ಯಾಯಾಲಯ ಕೇಳಿದೆ. ಉಪವಿಭಾಗಾಧಿಕಾರಿಗಳು ಈ ಸಂಬಂಧ ನೋಡಲ್ ಅಧಿಕಾರಿಯಾಗಿರುವುದರಿಂದ ವಂಚನೆಗೆ ಒಳಗಾದ ಠೇವಣಿದಾರರಿಂದ ಮೂಲ ದಾಖಲಾತಿಗಳನ್ನು ಪರಿಶೀಲಿಸಲು ಹಾಗೂ ಡಾಟಾ ಎಂಟ್ರಿ ಮಾಡಲು ಸಿಬ್ಬಂದಿಗಳ ಕೊರತೆ ಮತ್ತು ಹಣಕಾಸಿನ ಸಮಸ್ಯೆ ಇದೆ ಎಂದು ಕೈಕಟ್ಟಿ ಕುಳಿತಿದ್ದಾರೆ. ಇದರಿಂದ ನಮ್ಮ ಠೇವಣಿದಾರರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದರು.

ಠೇವಣಿದಾರರಿಂದ ಸಮಬಂಧಿಸಿದ ಬಾಂಡ್ ಮತ್ತು ರಶೀದಿ ಇತರೆ ದಾಖಲಾತಿಗಳನ್ನು ನವೆಂಬರ್ 2018ರಂದು ತಮ್ಮ ಕಛೇರಿಯಲ್ಲಿ ಉಪವಿಭಾಗಾಧಿಕಾರಿಗಳ ಶಾಖೆಯಲ್ಲಿ ಪಡೆದಿರುತ್ತಾರೆ. ಸುಮಾರು 8ತಿಂಗಳ ಹಿಂದೆಯೇ ಠೇವಣಿದಾರರಿಂದ ದಾಖಲಾತಿ ಪಡೆದಿದ್ದರೂ ತಮ್ಮ ಉಪವಿಭಾಗ ಕಛೇರಿಯಲ್ಲಿ ಯಾವುದೇ ವರದಿಯನ್ನೂ ತಯಾರಿಸಿಲ್ಲ. ಆಸ್ತಿ ಹರಾಜು ಪ್ರಕ್ರಿಯೆಗೆ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಸಂಬಂಧ  ನಮ್ಮ ಠೇವಣಿದಾರರಿಗೆ ಆತಂಕ ಪ್ರಾರಂಭವಾಗಿದ್ದು, ತೀವ್ರ ಸಮಸ್ಯೆಯಿಂದ ನರಳುತ್ತಿದ್ದಾರೆ. ಆದ್ದರಿಂದ ತಾವು ಈ ಬಗ್ಗೆ ತುರ್ತು ಕಠಿಣ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು.ಈ ಬಗ್ಗೆ ಯಾವುದೇ ಕ್ರಮ ಜಾರಿಯಾಗದಿದ್ದಲ್ಲಿ ಸಾವಿರಾರು ಮಹಿಳೆಯರು ಮತ್ತು ಠೇವಣಿದಾರರು ತಮ್ಮ ಕಛೇರಿ ಮುಂದೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ನೇತೃತ್ವದಲ್ಲಿ ನಿರಂತರ ಧರಣಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಎಲ್ಲವನ್ನೂ ಆಲಿಸಿದ ಸಚಿವರು ಶೀಘ್ರದಲ್ಲಿಯೇ ಸಂಪೂರ್ಣವಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಕುರುಬೂರು ಶಾಂತಕುಮಾರ್ ಮತ್ತಿತರರು ಸ್ಥಳದಲ್ಲಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: