ಮೈಸೂರು

ಮೈಸೂರು ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸೌಲಭ್ಯ ಸಮಿತಿ ಭೇಟಿ : ಪರಿಶೀಲನೆ

ಮೈಸೂರು,ಜೂ.21:- ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ  ಅಧ್ಯಕ್ಷರಾದ ರಮೇಶ ಚಂದ್ರ ರತನ್ ಅವರ ನೇತೃತ್ವದಲ್ಲಿ ಸದಸ್ಯರುಗಳಾದ ವೆಂಕಟ ರಮಣಿ,   ಎಮ್.ಎನ್. ಸುಂದರ್  ಮತ್ತು   ಸದಾನಂದ ತನವಾಡೆ ಅವರನ್ನೊಳಗೊಂಡ ಪ್ರಯಾಣಿಕರ ಸೌಲಭ್ಯ ಸಮಿತಿಯು ನಿನ್ನೆ ಪರಿಶೀಲನೆ ನಡೆಸಿತು. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಒದಗಿಸಲಾದ ವಿವಿಧ ಸೌಲಭ್ಯಗಳ ಮಾಹಿತಿ ಪಡೆಯಿತು.

ರೈಲ್ವೆಯು ಒದಗಿಸುತ್ತಿರುವ ಸೇವೆಗಳ ಬಗ್ಗೆ ತಮ್ಮ ಅನುಭವದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮುಂಗಡ ಟಿಕೇಟ್ ಕಾಯ್ದಿರಿಸುವ ಕಚೇರಿ (ಪಿಆರ್‌ಎಸ್), ಬುಕಿಂಗ್ ಕಚೇರಿ ಮತ್ತು ನಿರೀಕ್ಷಣಾ ಗೃಹಗಳಲ್ಲಿ ಕಾಯುತ್ತಿರುವ ರೈಲು ಬಳಕೆದಾರರೊಂದಿಗೆ ಸಮಿತಿ ಸಂವಹನ ನಡೆಸಿತು. ಈ ಸಂದರ್ಭದಲ್ಲಿ ಸಮಿತಿಯೊಂದಿಗೆ ರೈಲ್ವೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಲ್ದಾಣ ಪುನರಾಭಿವೃದ್ಧಿ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ ಹಲವಾರು ಕಾಮಗಾರಿಗಳನ್ನು ಕೈಗೊಂಡಿರುವ ಮೈಸೂರು ವಿಭಾಗದ ಪ್ರಯತ್ನವನ್ನು ಸಮಿತಿ ಶ್ಲಾಘಿಸಿದೆ. ಭಾರತೀಯ ರೈಲ್ವೆಯ ಇತರ ನಿಲ್ದಾಣಗಳು ಮೈಸೂರು ಮಾದರಿಯನ್ನು ಪುನರಾವರ್ತಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಮೈಸೂರು ನಿಲ್ದಾಣದ ಪ್ರಾಂಗಣದಲ್ಲಿ ಪುನರ್ನಿರ್ಮಾಣ ಕಾರ್ಯಗಳನ್ನು ಕೈಗೊಂಡಿರುವ ಕಾರಣಕ್ಕಾಗಿ ಸೇವೆಗಳಿಗೆ ಅಡ್ಡಿ ಉಂಟಾಗಿದ್ದು, ರಸ್ತೆ ಮೂಲಕ ಪ್ರಯಾಣಿಕರನ್ನು ಸಾಗಿಸಲು ಮಾಡಲಾದ ವ್ಯವಸ್ಥೆಯನ್ನು ಸಮಿತಿ ಪ್ರಶಂಸಿಸಿತು.

ಪ್ರಯಾಣಿಕರ ಸುರಕ್ಷತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಮಿತಿ ಸೂಚಿಸಿತು ಮತ್ತು ಯಾವ ಹಂತದಲ್ಲೂ ಕಡೆಗಣಿಸದಂತೆ  ವಿಭಾಗವನ್ನು ಆಗ್ರಹಿಸಿತು. ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು, ವಿಶೇಷವಾಗಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು ಹೆಚ್ಚಿಸುವ ಮೂಲಕ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ಬಗ್ಗೆ ಸಮಿತಿಯು ಒತ್ತು ನೀಡಿತು. ನಿಲ್ದಾಣದ ಪ್ಲಾಟ್ ಫಾರ್ಪ್ 6ರಲ್ಲಿಯೂ ಸಹ ತುರ್ತು ವೈದ್ಯಕೀಯ ಆರೈಕೆ ಕೇಂದ್ರವನ್ನು ಒದಗಿಸುವ ಸಾಧ್ಯತೆಯನ್ನು ಅನ್ವೇಷಿಸಲು ಸಮಿತಿಯು ರೈಲ್ವೆಗೆ ಸೂಚಿಸಿತು.

ರೈಲ್ವೆ ಬಳಕೆದಾರರಿಗೆ ನಿಲ್ದಾಣದಲ್ಲಿ ಉಚಿತ ಬ್ಯಾಟರಿ ವಾಹನಗಳು, ತುರ್ತು ವೈದ್ಯಕೀಯ ಆರೈಕೆ, ಕ್ಯಾಬ್‌ಗಳು ಮತ್ತು ಕೊಠಡಿಗಳ ಆನ್‌ಲೈನ್ ಬುಕಿಂಗ್ ವ್ಯವಸ್ತೆ, ಕುಡಿಯುವ ನೀರು ಮಾರಾಟ ಮಾಡುವ ಯಂತ್ರಗಳು ಮುಂತಾದ ವಿವಿಧ ಸೇವೆಗಳ ಗುಣಮಟ್ಟದ ಬಗ್ಗೆ ಸಮಿತಿ ತೃಪ್ತಿ ವ್ಯಕ್ತಪಡಿಸಿತು. ರೈಲು ನಿಲ್ದಾಣ ಹಾಗೂ ಆವರಣದಲ್ಲಿನ ಒಟ್ಟಾರೆ ಸ್ವಚ್ಛತೆಯ ಗುಣಮಟ್ಟವು ಉತ್ತಮವಾಗಿದ್ದು, ಇತರೆ ಪ್ರಮುಖ ನಿಲ್ದಾಣಗಳು ಸಹ ಈ ಮಾದರಿಯನ್ನು ಅನುಸರಿಸಬೇಕೆಂದು ಸಮಿತಿಯು ಅಭಿಪ್ರಾಯ ಪಟ್ಟಿತು.

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ   ಅಪರ್ಣ ಗರ್ಗ್ ಅವರು ರೈಲ್ವೆ ಗ್ರಾಹಕರಿಗೆ ಒದಗಿಸುತ್ತಿರುವ ಸೇವೆಗಳ ಮತ್ತಷ್ಟು ಸುಧಾರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಿತಿಯೊಂದಿಗೆ ಚರ್ಚಿಸಿದರು. ಮೈಸೂರು ರೈಲ್ವೆ ನಿಲ್ದಾಣದಲ್ಲಿ ವಿವಿಧ ಸೇವಾ ಸುಧಾರಣಾ ಕಾರ್ಯಗಳ ಸಂಬಂಧಿತ ಪವರ್ ಪಾಯಿಂಟ್ ಪ್ರಸ್ತುತಿಯನ್ನು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ   (ಡಾ) ಎಸ್.ಜಿ.ಯತೀಶ್   ನೀಡಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ   ಎ. ದೇವಸಹಾಯಂ   ವಂದಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: