ಪ್ರಮುಖ ಸುದ್ದಿ

7ನೇ ಆರ್ಥಿಕ ಗಣತಿ: ಗಣತಿ ಕೈಗೊಳ್ಳುವವರಿಗೆ ಸಹಕರಿಸಲು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ಸೂಚನೆ

ರಾಜ್ಯ(ಮಂಡ್ಯ)ಜೂ.21:-  ಗಣತಿ ಕೈಗೊಳ್ಳುವ ಸಿಎಸ್ಸಿ ಪ್ರತಿನಿಧಿಗಳಿಗೆ ಸಹಕರಿಸಿ, ಸ್ಥಳೀಯ ಆಡಳಿತ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಟಿ.ಯೋಗೇಶ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು   ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ 7 ನೇ ಆರ್ಥಿಕ ಗಣತಿಯ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣತಿಯ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಮತ್ತು ಅಸಂಘಟಿತ ಆರ್ಥಿಕ ಗಣತಿಯ ಕುರಿತಂತೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಪ್ರಚಾರ ಅಗತ್ಯವಾಗಿದೆ. ಕ್ಷೇತ್ರ ಕಾರ್ಯಾಚರಣೆ ಸಮಗ್ರವಾಗಿ ಮತ್ತು ಸಂಪೂರ್ಣವಾಗಿ ಜರುಗುವ ಕುರಿತು ಅಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಅವರು ತಿಳಿಸಿದರು.
ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಮತ್ತಿತರ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲ ಉದ್ಯಮಗಳ ಗಣತಿ ಕಾರ್ಯ ಇದೇ ತಿಂಗಳಲ್ಲಿ ಪ್ರಾರಂಭವಾಗಲಿದೆ. ಕೃಷಿ ಸರಕಾರಿ ಸಾರ್ವಜನಿಕ ರಕ್ಷಣಾ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸರಕುಗಳ ಉತ್ಪಾದನೆ ವಿತರಣೆ ಮಾರಾಟ ಹಾಗೂ ರಾಷ್ಟ್ರೀಯ ಉತ್ಪನ್ನಕ್ಕೆ ಮೌಲ್ಯ ತಂದು ಕೊಡುವ ಸೇವಾ ಚಟುವಟಿಕೆಗಳನ್ನು ಆರ್ಥಿಕ ಚಟುವಟಿಕೆಗಳೆಂದು ಪರಿಗಣಿಸಲಾಗುತ್ತದೆ ಎಂದರು.
ಈ ಬಾರಿ ಮೊಬೈಲ್ ಆ್ಯಪ್‍ ನೊಂದಿಗೆ ಸಿಎಸ್‍ಸಿ ಮತ್ತು ಎನ್‍ಎಸ್‍ಎಸ್‍ಒ ಗಣತಿ ಕಾರ್ಯ ನಡೆಯಲಿದೆ. ಬ್ಲಾಕ್ ರಚನೆ, ಗಣತಿದಾರರ, ಮೇಲ್ವಿಚಾರಕರ ನೇಮಕಾತಿ, ಕ್ಷೇತ್ರ ಕಾರ್ಯ ಪ್ರಗತಿ ವರದಿ ಸಲ್ಲಿಸುವ ಹೊಣೆ ಅವರದ್ದಾಗಿರುತ್ತದೆ. ಎರಡನೇ ಹಂತದ ಮೇಲ್ವಿಚಾರಣೆಯನ್ನು ಸಾಂಖಿಕ ಇಲಾಖೆ ನಿರ್ವಹಿಸಲಿದೆ. ಉಸ್ತುವಾರಿ ಸಮಿತಿಯಲ್ಲಿರುವ ಎಲ್ಲ ಇಲಾಖೆಗಳ ಕಾರ್ಯಾಚರಣೆ ಸುಗಮವಾಗಿ ಸುಸೂತ್ರವಾಗಿ ನಡೆಸಲು ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಯಾಲಕ್ಕಿಗೌಡ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಬಿ.ಸೌಮಿತ್ರ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಧನುಷ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ನಾಗೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: