ಮೈಸೂರು

‘ಯೋಗಾಭ್ಯಾಸವನ್ನು ನಿತ್ಯದ ಕಾಯಕವನ್ನಾಗಿ ಮಾಡಿಕೊಳ್ಳಬೇಕು’: ಪ್ರೊ. ಎಸ್. ವಿದ್ಯಾಶಂಕರ್

ಮೈಸೂರು,ಜೂ.22:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ   ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಉದ್ಘಾಟನೆ ಮತ್ತು ಯೋಗ ಪ್ರರ್ದಶನವನ್ನು   ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಸುಪ್ರಸಿದ್ಧ ಯೋಗಪಟುವಾದ ‘ಯೋಗರತ್ನ’   ಯೋಗ ಪ್ರಕಾಶ ಅವರು ಯೋಗ ಪ್ರದರ್ಶನದ ಮೂಲಕ ಕಾರ್ಯಕ್ರಮ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೈಸೂರು ಯೋಗ ಪರಂಪರೆಗೆ ವಿಶೇಷವಾದ ಕೊಡುಗೆಯನ್ನು ನೀಡಿದೆ. ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಕಳಸಪ್ರಾಯವಾಗಿದ್ದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ತಿರುಮಲೆ ಕೃಷ್ಣಮಾಚಾರ್ಯರವರು ಯೋಗದ ಗುರುಗಳಾಗಿದ್ದರು. ಮೈಸೂರಿನ ಯೋಗ ಪರಂಪರೆಗೆ ಪಟ್ಟಾಭಿಜೋಯಿಸ್, ಬಿ.ಕೆ.ಎಲ್. ಐಯ್ಯಂಗಾರ್ ಹಾಗೂ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಗಳು ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ. ಕಳಲೆ ನರಸರಾಜ ಅರಸುಅವರ ಸುಪುತ್ರರಾದ ಕಾಂತರಾಜ ಅರಸು ಅವರು ಮೈಸೂರಿನ ಯೋಗ ಪರಂಪರೆಗೆ  ತನ್ನದೇ ಆದ ನಿಟ್ಟಿನಲ್ಲಿ ಕೊಡುಗೆ ನೀಡಿರುತ್ತಾರೆ ಎಂದರು.

ಮೈಸೂರಿನ ಯೋಗ ಅಸೋಸಿಯೇಷನ್‍ನ   ರಮೇಶ್ ಶೆಟ್ಟಿ ಅವರು  ಕರಾಮುವಿಯ ಬೋಧಕ, ಬೋಧಕೇತರಿಗೆ ಯೋಗಾಭ್ಯಾಸವನ್ನು ಮಾಡಿಸಿದರು. ಜೊತೆಗೆ ತರುಣ್ ಎಂಬ ವಿದ್ಯಾರ್ಥಿ ಚಿತ್ತಾಕರ್ಷಕ ಕಠಿಣ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿದರು.  ಇಟಲಿ ದೇಶದ ಯೋಗಪಟು ನೀಡಿದ ವಿನ್ಯಾಸ ಯೋಗಾಸನಗಳು ಮನಮೋಹಕ ಮತ್ತು ಚಿತ್ತಾಕರ್ಷಕವಾಗಿತ್ತು.

ಅಧ್ಯಕ್ಷತೆಯನ್ನು ವಹಿಸಿದ್ದ ಕರಾಮುವಿಯ    ಕುಲಪತಿಗಳಾದ ಪ್ರೊ. ಎಸ್. ವಿದ್ಯಾಶಂಕರ್  ಮಾತನಾಡಿ ಯೋಗವು ಭಾರತೀಯ ಮೂಲದ ಅತ್ಯಂತ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಯೋಗದ ಮೂಲವನ್ನು ಪೌರಾಣಿಕವಾಗಿ ಭಗವಾನ್ ಶಿವನಿಂದ ಸೃಷ್ಟಿಯಾಗಿದೆ ಎಂಬ ನಂಬಿಕೆಯಿದೆ. ಯೋಗಾಭ್ಯಾಸವು ಮನ:ಶಾಂತಿ, ನೆಮ್ಮದಿ ಹಾಗೂ ಆರೋಗ್ಯವಂತ ಜೀವನಕ್ಕೆ ಪೂರಕವಾದುದು. ಪ್ರಸಕ್ತ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರದಿಂದ ಮನುಷ್ಯನ ಶ್ರಮ ಸಂಸ್ಕೃತಿ ನಾಶವಾಗುತ್ತಿದೆ. ಪ್ರಸಕ್ತ ದಿನಮಾನಗಳಲ್ಲಿ ವ್ಯಾಯಾಮವಿಲ್ಲದಿದ್ದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ಇವತ್ತಿನ ದಿನಮಾನಗಳಲ್ಲಿ ಮನುಷ್ಯನು ಮಾನಸಿಕ ಒತ್ತಡದ ನಡುವೆ ಬದುಕುತ್ತಿದ್ದು ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ದೇಹವನ್ನು ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ  ಯೋಗಾಭ್ಯಾಸವು ಅತ್ಯಂತ ಅವಶ್ಯಕವಾದುದು. ಯೋಗಾಭ್ಯಾಸದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ನಿತ್ಯದ ಕಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕರಾಮುವಿಯ   ಕುಲಸಚಿವರಾದ ಪ್ರೊ. ಬಿ. ರಮೇಶ್ ರವರು  ಎಲ್ಲಾ ಶಾಸನಬದ್ಧ ಅಧಿಕಾರಿಗಳು, ಬೋಧಕರು, ಬೋಧಕೇತರರು ಉಪಸ್ಥಿತರಿದ್ದರು.   ರಾಜರ್ಷಿ ಕಲಾ ತಂಡದ   ಮರಿಸ್ವಾಮಿ ಪ್ರಾರ್ಥಿಸಿದರು. ಡಾ. ಎನ್.ಆರ್ ಚಂದ್ರೇಗೌಡ ಸ್ವಾಗತಿಸಿದರು. ಡಾ.ಶೆಲ್ವ ಪಿಳ್ಳೆ ಅಯ್ಯಂಗಾರ್  ಕಾರ್ಯಕ್ರಮವನ್ನು ನಿರೂಪಿಸಿದರು. (ಎಸ್.ಎಚ್)

Leave a Reply

comments

Related Articles

error: