ಮೈಸೂರು

ಜುಲೈ ತಿಂಗಳಿನಿಂದ ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ ಕಾರ್ಯ ಆರಂಭ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರು,ಜೂ.22:- 7ನೇ ಆರ್ಥಿಕ ಗಣತಿ ಕಾರ್ಯ ಜುಲೈ ತಿಂಗಳಿನಿಂದ ಜಿಲ್ಲೆಯಲ್ಲಿ ನಡೆಯಲಿದ್ದು, ಶೀಘ್ರದಲ್ಲೇ ಸಿಬ್ಬಂದಿಗಳನ್ನು ನೇಮಿಸಿ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಿನ್ನೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಯಾವುದೇ ಕಟ್ಟಡ, ಉದ್ದಿಮೆ ಬಿಟ್ಟು ಹೋಗದಂತೆ ನಿಖರವಾಗಿ ಗಣತಿ ಕಾರ್ಯವನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾರ್ಗಸೂಚಿ ಪ್ರಕಾರವೇ ಸಕಾಲದಲ್ಲಿ ಕೈಗೊಳ್ಳಬೇಕು ಎಂದರು. ಈ ಗಣತಿಯು ಮೂರು ತಿಂಗಳ ಕಾಲ ನಡೆಯಲಿದ್ದು, ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಂತ ಉಪಯೋಗಕ್ಕಲ್ಲದ ಕೃಷಿ, ಕೃಷಿಯೇತರ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಮುಂತಾದ ಯಾವುದೇ ಆರ್ಥಿಕ ಚಟುವಟಿಕೆಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಉದ್ದಿಮೆಗಳ ಗಣತಿ ಕಾರ್ಯವನ್ನು ಏಲನೇ ಆರ್ಥಿಕ ಗಣತಿಯಲ್ಲಿ ಕೈಗೊಳ್ಳಲಾಗುವುದು ಎಂದರು.

ಉದ್ದಿಮೆಗಳನ್ನು ಗಣತಿ ಮಾಡುವಾಗ ಕಟ್ಟಡಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾ ಸ್ಥಳದಲ್ಲಿಯೇ ಗಣತಿ ಮಾಡಲಾಗುವುದಲ್ಲದೇ, ರಸ್ತೆ ಬದಿಯಲ್ಲಿ, ಬೀದಿಗಳಲ್ಲಿ, ಬಯಲು ಪ್ರದೇಶದಲ್ಲಿ ಯಾವುದೇ ಕಟ್ಟಡವಲ್ಲದ ಪ್ರದೇಶಗಳಲ್ಲಿ ನಡೆಯುತ್ತಿರುವ ಆಯಾ ಉದ್ದಿಮೆಯ ಮಾಲೀಕನ ಮನೆಯಲ್ಲಿಯೇ ಗಣತಿ ಮಾಡಲಾಗುವುದು ಎಂದರು. ಗಣತಿದಾರರು ಮನೆಗಳಿಗೆ, ಉದ್ದಿಮೆಗಳಿಗೆ ಭೇಟಿ ನೀಡಿದಾಗ ಉದ್ದಿಮೆಯ ಮಾಲೀಕರು,ಹಾಗೂ ಸಾರ್ವಜನಿಕರು ಅಗತ್ಯವಾದ ಎಲ್ಲಾ ವಿವರಗಳನ್ನೊದಗಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇತಿ ಸಹಾಯಕ ನಿರ್ದೇಶಕ ಪ್ರಕಾಶ್ ಎಂ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ ಎಂ, ಮೈಸೂರು ಉಪವಿಭಾಗಾಧಿಕಾರಿ ಶಿವೇಗೌಡ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇರಿ ಅಧಿಕಾರಿಗಳು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: