ದೇಶ

ಟಿಟಿಡಿ ಅಧ್ಯಕ್ಷನಾಗಿ ತಮ್ಮ ಚಿಕ್ಕಪ್ಪ ವೈ.ವಿ.ಸುಬ್ಬಾರೆಡ್ಡಿಯನ್ನು ನೇಮಕ ಮಾಡಿದ ಜಗನ್ ಮೋಹನ್ ರೆಡ್ಡಿ

ಅಮರಾವತಿ,ಜೂ. 22- ತಿರುಪತಿ ತಿರುಮಲ ದೇವಾಸ್ಥಾನಂ ಆಡಳಿತ ಮಂಡಳಿಗೆ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ವೈ.ವಿ.ಸುಬ್ಬಾರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ಆಂಧ್ರ ಪ್ರದೇಶ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇಮಕ ಮಾಡಿದ್ದಾರೆ.

ತಿರುಪತಿ ಶ್ರೀನಿವಾಸ ದೇಗುಲವೂ ಸೇರಿದಂತೆ ದೇಶದ ಹಲವು ಪ್ರಮುಖ ದೇಗುಲಗಳ ಆಡಳಿತ ನಿರ್ವಹಿಸುವ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಮ್ಸ್) ಆಡಳಿತ ಮಂಡಳಿಗೆ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ವೈ.ವಿ.ಸುಬ್ಬಾರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ವೈ.ವಿ.ಸುಬ್ಬಾರೆಡ್ಡಿ ನೇಮಕಾತಿಗೆ ಸಂಬಂಧಿಸಿದಂತೆ ವಿಶೇಷ ಪ್ರಧಾನ ಕಾರ್ಯದರ್ಶಿ ಮನಮೋಹನ್ ಸಿಂಗ್ ಅವರು ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸುಬ್ಬಾರೆಡ್ಡಿ ಟಿಟಿಡಿ ಅಧ್ಯಕ್ಷರಾಗಿ ಇಂದು (ಶನಿವಾರ) ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಟಿಟಿಡಿ ಮಂಡಳಿಯ ಇತರ ಸದಸ್ಯರನ್ನೂ ಶೀಘ್ರ ನೇಮಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ. ಟಿಟಿಡಿ ಅಧ್ಯಕ್ಷರಿಗೆ ಆಂಧ್ರಪ್ರದೇಶದಲ್ಲಿ ಸಂಪುಟದ ದರ್ಜೆ ಸ್ಥಾನಮಾನವಿದ್ದು, ಪ್ರತಿಷ್ಠಿತ ಹುದ್ದೆ ಎನಿಸಿಕೊಂಡಿದೆ. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಪುಟ್ಟ ಸುಧಾಕರ ರೆಡ್ಡಿ ಈಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜಿನಾಮೆ ಬೆನ್ನಲ್ಲೇ ಅದೇ ಸ್ಥಾನಕ್ಕಾಗಿ ಕಾದು ಕುಳಿತಿದ್ದ ಸುಬ್ಬಾರೆಡ್ಡಿ ಅವರಿಗೆ ಹಾದಿ ಸುಗಮವಾದಂತಾಗಿದೆ. ಇನ್ನು ನಾಲ್ಕು ದಿನಗಳ ಒಳಗೆ ಉಳಿದ ಸದಸ್ಯರ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದು ತಿಳಿದುಬಂದಿದೆ.

ಇನ್ನು ಸುಬ್ಬಾರೆಡ್ಡಿ ನೇಮಕ್ಕೆ ಆಂಧ್ರ ಪ್ರದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಸುಬ್ಬಾರೆಡ್ಡಿ ಓರ್ವ ಕ್ರಿಶ್ಚಿಯನ್. ಹೀಗಾಗಿ ಅವರ ನೇಮಕ ಮಾಡಬಾರದು ಎಂದು ಹಲವು ಸದಸ್ಯರು ವಿರೋಧಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸುಬ್ಬಾರೆಡ್ಡಿ ಅವರು, ನಾನು ಕೂಡ ಹಿಂದೂ ಎಂದು ಸುಬ್ಬಾರೆಡ್ಡಿ ತಮ್ಮ ಮೇಲಿನ ಆಪಾದನೆಗಳನ್ನು ತಳ್ಳಿ ಹಾಕಿದ್ದಾರೆ. (ಎಂ.ಎನ್)

Leave a Reply

comments

Related Articles

error: