ದೇಶಪ್ರಮುಖ ಸುದ್ದಿ

ತರಬೇತಿ ವಿಮಾನ ಖರೀದಿಯಲ್ಲಿ ಲಂಚ ಪಡೆದ ಆರೋಪ: ವಾಯುಪಡೆ ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

ನವದೆಹಲಿ,ಜೂ.22-ಭಾರತೀಯ ವಾಯುಪಡೆ ತರಬೇತಿ ವಿಮಾನ ಖರೀದಿ ವ್ಯವಹಾರದಲ್ಲಿ 339 ಕೋಟಿ ರೂ. ಲಂಚ (ಕಿಕ್‌ಬ್ಯಾಕ್) ಪಡೆದ ಆರೋಪದ ಮೇಲೆ ವಾಯುಪಡೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಸ್ವಿಡ್ಜರ್ಲೆಂಡ್ ಮೂಲದ ಕಂಪನಿಯಿಂದ ಭಾರತೀಯ ವಾಯುಪಡೆ 75 ತರಬೇತಿ ವಿಮಾನಗಳನ್ನು ಖರೀದಿಸಿದ ವೇಳೆ ಲಂಚ ಪಡೆದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಮತ್ತು ಸ್ವಿಜ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಪೈಲಟಸ್ ಏರ್‌ಕ್ರಾಫ್ಟ್‌ ಲಿಮಿಟೆಡ್‌ನ ಅಧಿಕಾರಿಗಳನ್ನೂ ಪ್ರಕರಣದಲ್ಲಿ ದೋಷಿಗಳೆಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸುತ್ತಮುತ್ತ ಭಂಡಾರಿ ಮಾಲೀಕತ್ವದ ಆಸ್ತಿಗಳ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿತ್ತು. ದಾಳಿ ಶನಿವಾರವೂ ಮುಂದುವರಿದಿದೆ. ಎಫ್‌ಐಆರ್‌ನಲ್ಲಿ ಸಿಬಿಐ ಭಂಡಾರಿ ಮಾಲೀಕತ್ವದ ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್‌ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯನ್ನೂ ಉಲ್ಲೇಖಿಸಿದೆ. ಭಂಡಾರಿ ವಿರುದ್ಧ ತನಿಖೆಗೆ ಸಿಬಿಐ 2016ರ ಜೂನ್‌ನಲ್ಲಿ ಚಾಲನೆ ನೀಡಿತ್ತು.

ಲಂಡನ್‌ನಲ್ಲಿ ರಾಬರ್ಟ್‌ ವಾದ್ರಾ ಪರವಾಗಿ ಬೇನಾಮಿ ಆಸ್ತಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಂಡಾರಿ ವಿರುದ್ಧ ಈಗಾಗಲೇ ತನಿಖೆ ಚಾಲ್ತಿಯಲ್ಲಿದೆ. ಸ್ವಿಜ್ ಮೂಲದ ವೈಮಾನಿಕ ಸಂಸ್ಥೆಗೆ ಭಂಡಾರಿ ಮಾಲೀಕತ್ವದ ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್‌ ಎಂಥ ಸೇವೆಗಳನ್ನು ನೀಡುತ್ತಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿದಂತೆಯೂ ಸಿಬಿಐ ತನಿಖೆ ಆರಂಭಿಸಿದೆ.

ವಾಯುಪಡೆಗೆ ಹೊಸದಾಗಿ ಸೇರಿದವರಿಗೆ ತರಬೇತಿ ನೀಡಲು ಈ ತರಬೇತಿ ವಿಮಾನಗಳನ್ನು ಬಳಸಲಾಗುತ್ತದೆ. ಹಲವು ಬಾರಿ ಅಪಘಾತಕ್ಕೀಡಾದ ದೇಶೀಯ ಎಚ್‌ಟಿಪಿ-32 ತರಬೇತಿ ವಿಮಾನಗಳ ಬದಲಿಗೆ ಸ್ವಿಡ್ಜರ್ಲೆಂಡ್‌ನಿಂದ ಪೈಲಟಸ್ ‘ಪಿಸಿ-7 ಮಾರ್ಕ್ 2’ ಮಾದರಿಯ ವಿಮಾನಗಳನ್ನು ಖರೀದಿಸಲು ವಾಯುಪಡೆ ನಿರ್ಧರಿಸಿತ್ತು.

ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಮೇ 2012ರಲ್ಲಿ 2,896 ಕೋಟಿ ರೂ. ವೆಚ್ಚದಲ್ಲಿ ಸ್ವಿಡ್ಜರ್ಲೆಂಡ್‌ನಿಂದ 75 ತರಬೇತಿ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಕಣದಲ್ಲಿದ್ದ ಇತರ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.(ಎಂ.ಎನ್)

Leave a Reply

comments

Related Articles

error: