ಮೈಸೂರು

ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ ಮಹಿಳಾ ಐಎಎಸ್ ಅಧಿಕಾರಿ ಎತ್ತಂಗಡಿ

ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಮುಂದಾದ ಮಹಿಳಾ ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಚಾಮರಾಜನಗರ ಜಿಲ್ಲಾ ಪಂಚಾಯತ್ ಸಿಇಓ ಆಗಿ ಬಂದಿದ್ದ ಹೆಪ್ಸಿಬಾ ರಾಣಿ ಕೊರ್ಲಾಪಟಿ ಅವರನ್ನು 9 ತಿಂಗಳಲ್ಲೇ ಐಟಿ ಮತ್ತು ಬಿಟಿ ಇಲಾಖೆಯ ನಿರ್ದೇಶಕರನ್ನಾಗಿಸಿ ಆದೇಶ ಹೊರಡಿಸಲಾಗಿದೆ.
ನೀತಿ ನಿಯಮಗಳಂತೆ ನಡೆದುಕೊಳ್ಳಬೇಕು ಎಂಬ ಆದರ್ಶದೊಂದಿಗೆ ಕೆಲಸ ಮಾಡುವ ಹೆಪ್ಸಿಬಾ ಅವರು ನರೇಗಾ ಕೆಲಸದ ಬಿಲ್ ಗಳನ್ನು ಕ್ಲಿಯರ್ ಮಾಡಲು ನಿರಾಕರಿಸಿದ್ದರಿಂದ ಅವರನ್ನು ಎತ್ತಂಗಡಿ ಮಾಡಲಾಗಿದೆ. ಯೋಜನೆಯ ನಿಗದಿತ ಮಟ್ಟದಲ್ಲಿ ಕೆಲಸಗಳನ್ನು ಪೂರೈಸಿರಲಿಲ್ಲ, ಜೊತೆಗೆ ಕೂಲಿ ಕೆಲಸಗಾರರ ಬದಲು ಯಂತ್ರಗಳನ್ನು ಉಪಯೋಗಿಸಿ ಕೆಲಸ ಮಾಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ನರೇಗಾ ಯೋಜನೆಯ ಬಿಲ್ ಗಳನ್ನು ಕ್ಲಿಯರ್ ಮಾಡಲು ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಪಂಚಾಯತ್ ಸಭೆಗಳಿಗೆ ಮಹಿಳಾ ಸದಸ್ಯರ ಬದಲು ಅವರ ಪತಿಯರು ಹಾಜರಾಗುತ್ತಿದ್ದರು. ಇದಕ್ಕೆ ಸಿಇಓ ವಿರೋಧಿಸಿದ್ದಲ್ಲದೇ ಸದಸ್ಯರೇ ಸಭೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು, ಇದಕ್ಕೆ ಮಹಿಳಾ ಸದಸ್ಯರು ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದರು.
ಗುತ್ತಿಗೆದಾರರು ಹಾಗೂ ರಾಜಕಾರಣಿಗಳು ಪ್ರಾಮಾಣಿಕ ಅಧಿಕಾರಿಯ ಕೈಕೆಳಗೆ ಕೆಲಸ ಮಾಡಲು ಒಪ್ಪದೇ, ತಮ್ಮ ಪ್ರಭಾವ ಬಳಸಿ ಐಎಎಸ್ ಅಧಿಕಾರಿಣಿಯನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ಅಧಿಕಾರ ವ್ಯಾಪ್ತಿ ಮೀರಿದ ಜಿಲ್ಲಾ ಪಂಚಾಯತ್ ಸದಸ್ಯರು ಅಧಿಕಾರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಿ, ಅಧಿಕಾರ ಕೇಂದ್ರೀಕೃತ  ರಾಜಧಾನಿಗೆ ಎರಡೂ ಮೂರು ಬಾರಿ ಪ್ರವಾಸ ಮಾಡಿ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ ಎನ್ನಲಾಗಿದೆ. ಜನ ಪ್ರತಿನಿಧಿಗಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳದ್ದು ಹಪ್ಸಿಬಾ ಅವರ ಎತ್ತಂಗಡಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಹಪ್ಸಿಬಾ ಅವರ ವರ್ಗಾವಣೆಯಿಂದ ಚಾಮರಾಜನಗರ ಜಲ್ಲೆಯ ಜನತೆಗೆ ಬೇಸರವಾಗಿದೆ. ಹಿಂದುಳಿದ ವರ್ಗದ  ಜನತೆಯ ಮೆಚ್ಚಿನ ಅಧಿಕಾರಿಯಾಗಿದ್ದರು. ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸುವುದು ಹಾಗೂ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸುಧಾರಣೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದು  ಆಶಾ ಕಾರ್ಯಕರ್ತೆ ಲಕ್ಷ್ಮಿ ಹೇಳುತ್ತಾರೆ, ಇನ್ನು ಎರಡು ತಿಂಗಳಲ್ಲಿ 10 ಸಾವಿರ ಶೌಚಾಲಯ ನಿರ್ಮಿಸಲು ಪಣ ತೊಟ್ಟಿದ್ದರು ಎಂದು ಗ್ರಾಮಸ್ಥರು ಹಪ್ಸಿಬಾ ಅವರ ಕಾರ್ಯಗಳ ಬಗ್ಗೆ ಶ್ಲಾಘಿಸಿದ್ದಾರೆ.

Leave a Reply

comments

Related Articles

error: