ಮೈಸೂರು

ಮೈಸೂರಿನಲ್ಲಿ “ಕೊಡಗಿನ ತಲ್ಲಣ’’ ಕೃತಿ ಬಿಡುಗಡೆ

ಮೈಸೂರು, ಜೂ.24:- ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಬರೆದ “ಕೊಡಗಿನ ತಲ್ಲಣ, ದುರಂತದ ಹಿಂದಿನ ಸತ್ಯಗಳು’’ ಕೃತಿ ಮೈಸೂರಿನಲ್ಲಿ ನಿನ್ನೆ ಬಿಡುಗಡೆಯಾಯಿತು.
ಮೈಸೂರು ಪತ್ರಕರ್ತರ ಸಂಘ ಹಾಗೂ ಯುಕ್ತ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವನ್ಯಜೀವಿ ತಜ್ಞ ಕೃಪಾಕರ, ಜಲಪ್ರಳಯ ಕೇವಲ ಕೊಡಗಿನ ತಲ್ಲಣವಲ್ಲ. ಇದು ಜಾಗತಿಕ ತಲ್ಲಣ. ಜಗತ್ತಿನಾದ್ಯಂತ ಇದು ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
“ಈ ಪುಸ್ತಕದಲ್ಲಿ ಕೊಡಗಿನ ಚಾರಿತ್ರ್ಯ, ಇತಿಹಾಸ, ಬದುಕು ಅನಾವರಣಗೊಂಡಿದೆ. ಇದೊಂದು ಸಂಗ್ರಹ ಯೋಗ್ಯ ಪುಸ್ತಕ. ಅಲ್ಲದೆ, ಪ್ರಸ್ತುತ ಸನ್ನಿವೇಶದಲ್ಲಿ ಪ್ರಾಕೃತಿಕ ಸಂಪನ್ಮೂಲಗಳನ್ನು ಹೇಗೆ ಉಳಿಸಿಕೊಳ್ಳಬೇಕಿದೆ ಎಂಬುದು ಸವಾಲಿನ ವಿಷಯವನ್ನು ಚರ್ಚಿಸಬೇಕಿದೆ,” ಎಂದರು.
“”ಜಾರ್ಖಂಡ್‍ನ ಬಸ್ಟರ್ ಎಂಬ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಯೋಜನೆ ನಡೆಯಿತು. ಮೂರು ವರ್ಷದ ಹಿಂದೆ ಕೇಂದ್ರ ಸರಕಾರ ಯೋಜನೆಯ ಕೆಲವು ಭಾಗಗಳನ್ನು ಡಿ ನೋಟಿಫಿಕೇಶನ್ ನೀಡಿತು. ಆ ನೆಪದಲ್ಲಿ ಹುಲಿ ಯೋಜನೆಗೆ ತೊಡಕಾಗುತ್ತಾರೆ ಎಂದು ಅಲ್ಲಿದ್ದ ಆದಿವಾಸಿಗಳನ್ನು ಬಲವಂತವಾಗಿ ಆಚೆ ಹಾಕಲಾಗುತ್ತದೆ. ಆದರೆ, ಇದಾದ 3 ತಿಂಗಳಿನಲ್ಲೇ ಅದಾನಿ ಗ್ರೂಪ್‍ಗೆ ಆ ಜಾಗವನ್ನು ಮೈನಿಂಗ್‍ಗೆ ಕೊಡಲಾಗುತ್ತದೆ. ಭಾರತದಲ್ಲಿ ಇದು ಸುದ್ದಿಯಾಗಲೇ ಇಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ಪುಸ್ತಕದ ಬಗ್ಗೆ ಪ್ರಾಧ್ಯಾಪಕರಾದ ಡಾ.ಬೆಸೂರು ಮೋಹನ ಪಾಳೇಗಾರ ಮಾತನಾಡಿ, ಪುಸ್ತಕದಲ್ಲಿ 11 ಅಧ್ಯಾಯಗಳಿವೆ. ಕೊಡಗಿನ ಇತಿಹಾಸದ ಜತೆಗೆ ಕೊಡಗಿನ ತಲ್ಲಣಗಳನ್ನು ರಮೇಶ್ ಉತ್ತಪ್ಪ ದಾಖಲಿಸಿದ್ದಾರೆ. ಇಡೀ ಜಿಲ್ಲೆಯನ್ನು ಪ್ರವಾಸ ಮಾಡಿ ಸತ್ಯ ಮತ್ತು ನಿಖರವಾದ ಮಾಹಿತಿಯನ್ನು ಅವರು ನೀಡಿದ್ದಾರೆ. ಕೊಡಗಿನ ತಲ್ಲಣಕ್ಕೆ ಕಾರಣವಾದ ರೆಸಾರ್ಟ್, ಮರಗಳ ಹನನ, ಪ್ರವಾಸೋದ್ಯಮ, ನೆರೆ ರಾಜ್ಯದವರು ಹಾವಳಿ ಎಲ್ಲವನ್ನೂ ಲೇಖಕರು ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ. ಇದು ವಿಶ್ವವಿದ್ಯಾಲಯದಲ್ಲಿ ಅಧ್ಯಯನಶೀಲ ಕೃತಿಯಾಗಬೇಕು’’ ಎಂದು ಆಶಿಸಿದರು.
ವಿಜಯ ಕರ್ನಾಟಕ ಪತ್ರಿಕೆ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಕೊಡಗಿನ ದುರಂತಕ್ಕೆ ಯಾರನ್ನು ದೂರಬೇಕು ಎಂಬ ಪ್ರಶ್ನೆ ಮೂಡುತ್ತದೆ. ಪ್ರವಾಸೋದ್ಯಮದ ಹೆಸರಲ್ಲಿ ಶೋಷಣೆ ಮಾಡುತ್ತಿರುವ ಉದ್ಯಮವನ್ನೋ, ಅದಕ್ಕೆ ಅವಕಾಶ ಮಾಡಿಕೊಟ್ಟ ನಮ್ಮ ಸರಕಾರದ ವ್ಯವಸ್ಥೆಯನ್ನೋ, ಇಲ್ಲ ಗೊತ್ತೋಗೊತ್ತಿಲ್ಲದೆ ಈ ಅಪಾಯಕ್ಕೆ ತೆರೆದುಕೊಂಡಿರುವ ಜನರನ್ನೊ ಎಂಬುದನ್ನು ಪತ್ರಕರ್ತರಾಗಿ ಆಲೋಚಿಸಬೇಕಿದೆ. ಹಣಕ್ಕಾಗಿ ಜನ ತಮ್ಮ ಜಮೀನನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಉದ್ದಿಮೆದಾರರು ಬರುತ್ತಿದ್ದಾರೆ. ಇವರಿಬ್ಬರ ದೌರ್ಬಲ್ಯವನ್ನು ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ಸರಕಾರ ಹಾಗೂ ಜನಪ್ರತಿನಿಧಿಗಳು ಈ ದುರಂತಕ್ಕೆ ನೇರ ಕಾರಣರಾಗಿದ್ದಾರೆ ಎಂದು ಹೇಳಿದರು.
ಇಂದು ಕಾಳಸಂತೆಯಲ್ಲಿ ಕಾಳುಮೆಣಸು, ಏಲಕ್ಕಿ ಆಮದಾಗಿ ಕೊಡಗಿಗೆ ಬರುತ್ತಿದೆ. ಇದನ್ನು ತಡೆಯುವ ಕೆಲಸವನ್ನು ಸರಕಾರ ಮಾಡಬೇಕಿದೆ. ಉದ್ಯೋಗ ಸೃಷ್ಟಿಸುವ ಜತೆಗೆ ಕೊಡಗು ಹಾಗೂ ಮಲೆನಾಡಿನ ಪ್ರದೇಶವನ್ನು ಕಾಪಾಡಬೇಕಿದೆ. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಆರ್ಥಿಕ ಸಬಲೀಕರಣಕ್ಕೆ ಸರಕಾರ ಗಮನ ಹರಿಸಬೇಕು. ನೌಕರಿಯಲ್ಲಿ ಕೊಡಗಿನ ಜನರಿಗೆ ಮೀಸಲು ಕೊಡುವ ಬಗ್ಗೆಯೂ ಚಿಂತನೆ ಆಗಬೇಕಿದೆ. ಮಲೆನಾಡಿನ ಅತ್ಯಂತ ದುರ್ಗಮ ಪ್ರದೇಶದಲ್ಲಿ ರಸ್ತೆ, ಸೇತುವೆ ಏನು ಇಲ್ಲ. ಮಳೆಗಾಲದಲ್ಲಿ ಅಲ್ಲಿನ ಜನರ ಜೀವಕ್ಕೂ ಗ್ಯಾರಂಟಿ ಇಲ್ಲ. ಅವರು ಬೆಳೆದ ಬೆಳೆಗೂ ಬೆಳೆ ಸಿಗುತ್ತಿಲ್ಲ. ಇವರೆಲ್ಲರಿಗೂ ಪರ್ಯಾಯ ಆಯ್ಕೆಗಳನ್ನು ಸರಕಾರ ಆಲೋಚಿಸಬೇಕು ಎಂದ ಅವರು ಪತ್ರಕರ್ತನಿಗೆ ಸಾಮಾಜಿಕ ಕಳಕಳಿ ಇರಬೇಕು. ಜನರ ಕಣ್ಣು ತೆರೆಸುವ ಕೆಲಸ ಮಾಡಬೇಕು ಎಂದರು.
ಪುಸ್ತಕದ ಲೇಖಕ ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, “”ಪತ್ರಕರ್ತನಾಗಿ ಕೊಡಗಿನಲ್ಲಿ ಕಳೆದ ವರ್ಷ ನಡೆದ ಜಲಪ್ರಳಯವನ್ನು ಕಣ್ಣಾರೆ ಕಂಡು ಪುಸ್ತಕ ರೂಪದಲ್ಲಿ ಅನುಭವವನ್ನು ದಾಖಲಿಸಿದ್ದೇನೆ. ಕೊಡಗಿನಲ್ಲಿ ಜಲಪ್ರಳಯವಾದಾಗ ಒಂದೊಂದು ಮಾಧ್ಯಮಗಳು ಒಂದೊಂದು ರೀತಿಯಲ್ಲಿ ಸುದ್ದಿ ಬಿತ್ತರಿಸಿದವು. ಹಲವರು ಮತ್ತದೇ ರೀತಿಯಲ್ಲಿ ವಾದ ಮಂಡಿಸಿದರು. ಇದೆಲ್ಲವನ್ನೂ ಅಂಶಗಳು “ಕೊಡಗಿನ ತಲ್ಲಣ’ ಪುಸ್ತಕ ಬರೆಯಲು ನನಗೆ ಪ್ರೇರೇಪಿಸಿತು,” ಎಂದರು.
ವನ್ಯಜೀವಿ ತಜ್ಞ ಸೇನಾನಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಯುಕ್ತಾ ಪ್ರಕಾಶನದ ಪ್ರಕಾಶಕರಾದ ಓಂಕಾರಪ್ಪ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: