ಮೈಸೂರು

ಸರಳ ದಸರಾ ಆಚರಿಸಿ, ರೈತರಿಗೆ ಮನೋಸ್ಥೈರ್ಯ ತುಂಬಿರಿ: ಪಾಂಚಜನ್ಯ ಗೆಳೆಯರ ಬಳಗ ಒತ್ತಾಯ

ನಾಡ ಹಬ್ಬ ದಸರಾ ಸಂಭ್ರಮ ಆಚರಣೆಗೆ ಸರ್ಕಾರ ಕಡಿವಾಣ ಹಾಕಿ ಮೈಸೂರು ರಾಜಮನೆತನದ ಪರಂಪರೆಯಂತೆ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಚಾಮುಂಡೇಶ್ವರಿ ಹಾಗೂ ತಲಕಾವೇರಿಯಲ್ಲಿ ನಡೆಸಿ ವರುಣನ ಕೃಪೆಗೆ ಪ್ರಾರ್ಥಿಸಿ ಈ ವರ್ಷ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಿಸಲಿ ಎಂದು ಪಾಂಚಜನ್ಯ ಗೆಳೆಯರ ಬಳಗ ಅಧ್ಯಕ್ಷ ಎನ್.ವಿನಯ್ ಪಾಂಚಜನ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿವಾದದಿಂದ ಮೈಸೂರು, ಮಂಡ್ಯ ಭಾಗದ ಜನರು ತತ್ತರಿಸಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ, ಹಿಂಗಾರು ಇನ್ನೂ ಅನುಮಾನ. ಇಂತಹ ಪರಿಸ್ಥಿತಿಯಲ್ಲಿ ಅದ್ಧೂರಿ ದಸರಾ ಬೇಡ, ಮಳೆಯಾಗದೆ ಅಣೆಕಟ್ಟುಗಳು ಒಣಗಿ ವಿದ್ಯುತ್ ಕ್ಷಾಮ ತಲೆದೂರಿದೆ. ಉತ್ಸವಕ್ಕಾಗಿ ನಗರದಾದ್ಯಂತ ದೀಪಾಲಂಕಾರ ಮಾಡಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ವ್ಯತ್ಯಯ ಉಲ್ಬಣಿಸಲಿದೆ. ಗಾಯದ ಮೇಲೆ ಬರೆ ಎಳೆದಂತೆ ಸುಪ್ರೀಂ ಕೋರ್ಟಿನ ತೀರ್ಪು ರಾಜ್ಯಕ್ಕೆ ಮಾರಕವಾಗಿತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ ದಸರಾ ಆಚರಿಸಲು ಮುಂದಾಗಿರುವುದು ಖಂಡನೀಯ. ನವೆಂಬರ್- ಡಿಸೆಂಬರ್ ಒಳಗೆ ವಿದ್ಯುತ್  ಹಾಗೂ ಮುಂದಿನ ವರ್ಷ ಜನವರಿಯಿಂದಲೇ ಕುಡಿಯುವ ನೀರಿನ ಆಭಾವವು ರಾಜ್ಯಕ್ಕೆ ಕಾಡಾಲಿದೆ  ಇಂತಹ ಸಂದರ್ಭದಲ್ಲಿ ಯುವದಸರಾ, ಯುವ ಸಂಭ್ರಮವನ್ನು ಕೋಟ್ಯಾಂತರ ರೂಪಾಯಿಗಳ ವೆಚ್ಚ ಮಾಡಿ ಮಾಡುವುದು ಯಾರ ಹಿತಕ್ಕಾಗಿ ಎಂದು ಪ್ರಶ್ನಿಸಿದರು. ದಸರಾಗಾಗಿ ಮೀಸಲಿರುವ ಹಣವನ್ನು ರೈತರ ಅಭ್ಯುದಯಕ್ಕೆ ಬಳಸಿ ಆತ್ಮಹತ್ಯೆಯನ್ನು ತಪ್ಪಿಸಿ ಮನೋಸ್ಥೈರ್ಯವನ್ನು ತುಂಬಬೇಕು ಎಂದು ಕೋರಿ  ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅರ್ಜುನ್, ಮಹೇಶ್, ವಿನಯ್ ಹಾಗೂ ಮಂಜು ಉಪಸ್ಥಿತರಿದ್ದರು.

Leave a Reply

comments

Related Articles

error: