ಪ್ರಮುಖ ಸುದ್ದಿಮೈಸೂರು

ನಗದು ವ್ಯವಹಾರ ಇರದಲ್ಲಿ ಭ್ರಷ್ಟಾಚಾರ ಇರುವುದಿಲ್ಲ : ಸಚಿವ ಡಿವಿಎಸ್

ದೇಶದ ಅಭಿವೃದ್ಧಿಗೆ ಆ ದೇಶದ ಆರ್ಥಿಕ ಶಿಸ್ತು ಬಹಳ ಮುಖ್ಯ. ಅದರಂತೆ ದೇಶದಲ್ಲಿ ಆರ್ಥಿಕ ಶಿಸ್ತನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹಾಗೂ ಭ್ರಷ್ಟಾಚಾರ, ಭಯೋತ್ಪಾದನೆ, ಕಪ್ಪುಹಣವನ್ನು ನಿಗ್ರಹ ಮಾಡುವ ಸಲುವಾಗಿ ಅಧಿಕ ಬೆಲೆಯ ನೋಟುಗಳನ್ನು ನಿಷೇಧಿಸಲಾಯಿತು. ನಗದು ವ್ಯವಹಾರ ಎಲ್ಲಿರುವುದಿಲ್ಲವೋ ಅಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ಕಪ್ಪುಹಣ ನಡೆಯುವುದಿಲ್ಲ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ಮೈಸೂರು ಜೆ.ಕೆ.ಮೈದಾನದಲ್ಲಿ ಮಾಹಿತಿ ತಂತ್ರಜ್ಞಾನ ಮಂತ್ರಾಲಯ, ನೀತಿ ಆಯೋಗ ಹಾಗೂ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ  ಶುಕ್ರವಾರ ಆಯೋಜಿಸಿದ್ದ ಡಿಜಿ ಧನ್ ಮೇಳವನ್ನು ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಡಿಜಿಟಲೀಕರಣದಿಂದ ಅರ್ಥ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬಹುದು. ಡಿ.25 ರಂದು ಆರಂಭವಾದ ಡಿಜಿ ಧನ್ ಮೇಳ ಕಾರ್ಯಕ್ರಮದ 48ನೆಯ ಡ್ರಾ ಮೈಸೂರಿನಲ್ಲಿ ನಡೆದಿದೆ. ಪ್ರವಾಸಿತಾಣವಾದ ಮೈಸೂರಿನ ಜನತೆ ಡಿಜಿಟಲೀಕರಣ ಬಳಸಲು ಮುಂದಾದರೆ ದೇಶವಿದೇಶಗಳಿಂದ ಬರುವ ಪ್ರವಾಸಿಗರು ಸಂತಸಪಡುತ್ತಾರೆ ಎಂದು ಹೇಳಿದರು.

ಹಣಕಾಸು ಮತ್ತು ಕಾರ್ಪೊರೇಟ್ ಕಚೇರಿಗಳ ರಾಜ್ಯ ಸಚಿವ ಅರ್ಜುನ್ ಮೇಘಾವಾಲ್ ಮಾತನಾಡಿ ಯುವಕರು ಡಿಜಿಟಲೀಕರಣ ಬಳಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಮೊಬೈಲ್‍ನಲ್ಲಿ ಯುಎಸ್‍ಎಸ್‍ಡಿ ಮೂಲಕ ಖಾತೆಗೆ ಹಣ ಜಮಾ ಮಾಡುವುದು, ಸ್ಮಾರ್ಟ್ ಫೋನ್‍ನಲ್ಲಿ ಯುಪಿಐ ಆಕ್ಟ್ ಮೂಲಕ ಹಣ ಜಮಾವಣೆ ಮಾಡುವುದು, ಇ ವ್ಯಾಲೆಟ್, ಆಧಾರ್ ಕಾರ್ಡ್‍ನಿಂದ ಪಾವತಿಸುವುದು ಹೇಗೆ ಎನ್ನುವುದರ ಕುರಿತು ಅರಿವು ಮೂಡಿಸಲಾಯಿತು.

Leave a Reply

comments

Related Articles

error: