ಪ್ರಮುಖ ಸುದ್ದಿಮೈಸೂರು

ಸಾಮಾಜಿಕ ಬಹಿಷ್ಕಾರ : ನೊಂದ ಕುಟುಂಬದಿಂದ ನ್ಯಾಯಕ್ಕೆ ಒತ್ತಾಯ

ಜಮೀನು ರಸ್ತೆ ವಿಷಯವಾಗಿ ಗ್ರಾಮ ನ್ಯಾಯ ಸಭೆಯಲ್ಲಿ ಬಹಿಷ್ಕಾರ

ಮೈಸೂರು, ಜೂ.24 :  ಜಯಪುರ ಹೋಬಳಿ ಟಿ. ಕಾಟೂರು ಗ್ರಾಮದಲ್ಲಿನ ತಮ್ಮ ಸರ್ವೆ ನಂಬರ್ 148/5 ರ ಜಮೀನಿನ ಬದಿಯಲ್ಲಿ ಸರ್ಕಾರಿ ಬಂಡಿ ರಸ್ತೆ ಹೋಗಿದ್ದರೂ, ಬೇಕೆಂದೇ ತಮ್ಮ ಜಮೀನಿನ ಮೇಲೆ ರಸ್ತೆ ಮಾಡುವುದನ್ನು ವಿರೋಧಿಸಿದ ತಮ್ಮ ಕುಟುಂಬಕ್ಕೆ ಕೆಲವರ ಕುಮ್ಮಕ್ಕಿನಿಂದ ಬಹಿಷ್ಕಾರ ಹಾಕಿದ್ದು, ಸಂಬಂಧಿಸಿದವರು ನ್ಯಾಯ ದೊರಕಿಸಿಕೊಡಬೇಕೆಂದು ಸಂತ್ರಸ್ತ ಕುಟುಂಬದ ನಂಜಪ್ಪ ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ತಮ್ಮ ತಾಯಿ ಹಾಗೂ ಸಹೋದರರ ಜೊತೆ ಜಂಟಿ ಖಾತೆ ಹೊಂದಿದ್ದು, ಅದರಲ್ಲಿ ಸುಮಾರು 36 ಗುಂಟೆ ಜಮೀನು ಸೇರುತ್ತದೆ. ಪಕ್ಕದಲ್ಲೇ ಸರ್ಕಾರಿ ಬಂಡಿ ದಾರಿ ಹೋಗಿದ್ದು, ಅದರ ಬದಲು ತಮ್ಮ ಜಮೀನಿನ ಮೇಲೆ ದಾರಿ ನಿರ್ಮಿಸಲು ಗ್ರಾಮದ ಕೇಶವಮೂರ್ತಿ, ಟಿಸಿ. ಸಿದ್ದನಾಯಕ, ದೇವರಾಜು, ಸಿದ್ದರಾಜು ಮೊದಲಾದವರು ಯತ್ನಿಸಿದರು. ಇದರಿಂದ ತಮ್ಮ ಕುಟುಂಬ ಜಮೀನು ಕಳೆದುಕೊಂಡು ಬೀದಿಗೆ ಬೀಳುವ ಕಾರಣ ಕೇವಲ ಸರ್ಕಾರಿ ದಾರಿಯಲ್ಲಿಯೇ ರಸ್ತೆ ನಿರ್ಮಿಸಿ ಎಂದು ಪಟ್ಟು ಹಿಡಿದ ಬಳಿಕ ತಮ್ಮ ವಿರುದ್ಧ ಹಲವರು ದ್ವೇಷ ಸಾಧಿಸಲಾರಂಭಿಸಿದರು.

ಜೊತೆಗೆ, ತಾವು ಸರ್ವೆ ಮಾಡಿಸಿ ನೆಟ್ಟಿದ್ದ ಕಲ್ಲುಕಂಬ, ತಂತಿ ಬೇಲಿಯನ್ನು ದೌರ್ಜನ್ಯದಿಂದ ತೆಗೆದಿದ್ದು, ಈ ಕುರಿತಂತೆ ಜಯಪುರ ಠಾಣೆಗೆ ದೂರು ನೀಡಿ, ತಹಸೀಲ್ದಾರರು ಮಧ್ಯ ಪ್ರವೇಶಿಸಿ ತಮಗೆ ನ್ಯಾಯ ದೊರಕಿಸಿಕೊಡಲು ಯತ್ನಿಸಿದರೂ ಅದಕ್ಕೆ ಯಾರೂ ಮಾನ್ಯತೆ ನೀಡುತ್ತಿಲ್ಲ.

ಇನ್ನು, ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಕಾರಣ ಗ್ರಾಮದ ಯಾವುದೇ ಅಂಗಡಿಗೆ ಹೋದರೂ ಏನನ್ನೂ ನೀಡುವುದಿಲ್ಲ, ತಮ್ಮ ಕುಟುಂಬದ ಮಕ್ಕಳು ಶಾಲೆಗೆ ಹೋದರೆ ಅಲ್ಲಿಯೂ ಇತರೆ ಮಕ್ಕಳು ಅವರನ್ನು ಮಾತನಾಡಿಸದಂತೆ ಮಾಡಲಾಗಿದೆ.

ಅಲ್ಲದೆ, ತಾವು ಗಾರೆ ಕೆಲಸ ಮೇಸ್ತ್ರಿಯಾಗಿದ್ದು, ತಮ್ಮ ಬಳಿ ಗಾರೆ ಕೆಲಸದವರು ಬಾರದಂತೆ ಅವರಿಗೆ ಬೆದರಿಕೆ ಹಾಕಲಾಗಿದೆ. ಜೊತೆಗೆ, ತಾವು ನಗರದಲ್ಲಿ ಕೆಲಸ ಮುಗಿಸಿಕೊಂಡು ವಾಪಸಾಗುವಾಗ ಅಪಘಾತ ಮಾಡಿಸುವ, ಹಲ್ಲೆ ಮಾಡಿಸುವ ಬೆದರಿಕೆ ಸಹಾ ಹಾಕಲಾಗಿದೆ.

ಆದ್ದರಿಂದ ತಾವು ನೀಡಿರುವ ಮನವಿ ಪುರಸ್ಕರಿಸಿ ಜಿಲ್ಲಾಧಿಕಾರಿ, ತಹಸೀಲ್ದಾರರು, ಪೊಲೀಸ್ ವರಿಷ್ಠಾಧಿಕಾರಿಗಳು ಬಹಿಷ್ಕಾರ ರದ್ದುಗೊಳಿಸಲು ಕ್ರಮ ಕೈಗೊಳ್ಳುವುದರೊಡನೆ ಜಮೀನು ಉಳಿಸಿಕೊಡಬೇಕೆಂದು ಮನವಿ ಮಾಡಿದರು.

ತಾಯಿ ಕೆಂಪಮ್ಮ, ಸಹೋದರ ಸಣ್ಣಸ್ವಾಮಿ ಹಾಜರಿದ್ದರು.(ವರದಿ : ಕೆ.ಎಂ.ಆರ್)

Leave a Reply

comments

Related Articles

error: