ಲೈಫ್ & ಸ್ಟೈಲ್

ತಂಬಾಕು ನಿಯಂತ್ರಣದಲ್ಲಿ ಹೆಣ್ಣು ಮಕ್ಕಳಿಗೆ ಕಿವಿ ಮಾತು

ನೀವು ಮದುವೆ  ಆಗುವ ಹುಡುಗ ಸಿಗರೇಟು, ಬೀಡಿ, ಕುಡಿತ, ಮಾದಕ ಪದಾರ್ಥಗಳ ವ್ಯಸನಿಯೇ?  ಹೌದು ಎನ್ನುವುದಾದರೆ, ಯೋಚಿಸಿ.  ಏಕೆಂದರೆ, ಹೊಗೆಸೊಪ್ಪಿನ ಧೂಮದಲ್ಲಿ ಇರುವ ರಾಸಾಯನಿಕ ವಸ್ತುಗಳು ದೇಹದ ಆರೋಗ್ಯಕರ ಜೀವಾಣುಗಳಿಗೆ ಅಂಟಿಕೊಂಡು ಅವನ್ನು ಕೆಡಿಸಿ  ಹಾಳು ಮಾಡಿ ವಿಕಾರಗೊಳಿಸುವುದರಿಂದ ಹುಟ್ಟುವ ಮಕ್ಕಳು ಆರೋಗ್ಯಕರವಾಗಿ ಇರುವವೋ, ಇಲ್ಲವೋ ಎನ್ನುವುದು ಹೇಳಾಲಿಕ್ಕಾಗುವುದಿಲ್ಲ.   ಅಲ್ಲದೆ, ಅಕಸ್ಮಾತ್ ಮದುವೆ ಆದರೆ, ಆದಷ್ಟು ಬೇಗ ಸಿಗರೇಟು, ಬೀಡಿ, ಗುಟ್ಕಾ, ಜರ್ದಾ, ಖೈನಿ, ಮುಂತಾದ ತಂಬಾಕು ಪದಾರ್ಥಗಳನ್ನು ಸೇವಿಸುವ ಕೆಟ್ಟ ಅಭ್ಯಾಸವನ್ನು ಬಿಡಿಸಿ ಏಕೆಂದರೆ, ಹೀಗೆ ಮುಂದುವರಿದರೆ ಖಾಯಿಲೆ, ಕಸಾಲೆಗಳ ಜೊತೆಗೆ, ನಿಮ್ಮನ್ನು ಲೈಂಗಿಕವಾಗಿ  ತೃಪ್ತಿಗೊಳಿಸುವ ಅವರ   ಲೈಂಗಿಕ ಶಕ್ತಿಯೇ ಕುಂಠಿತಗೊಳ್ಳುತ್ತದೆ ಮತ್ತು ಸಂಸಾರದಲ್ಲಿ ಬರೀ ಹೊಗೆಯಾಡುತ್ತದೆ.   ನಿಮಗೆ  ಗೊತ್ತಿಲ್ಲದೇ ನೀವು ಒಬ್ಬ ಧೂಮಪಾನಿಯನ್ನು ಮದುವೆ ಆಗಿದ್ದರೆ, ಅವರ ಚಟವನ್ನು ಆದಷ್ಟು ಬೇಗ ನಿಲ್ಲಿಸಿ ಮತ್ತು ಸುಖ ಸಂಸಾರ ನಡೆಸುವಲ್ಲಿ ಯಶಸ್ವಿಯಾಗಿ.  ಇದು ಬರೀ ಮಾತಲ್ಲ, ವೈದ್ಯಕೀಯವಾಗಿ ಸಾಕಷ್ಟು ಸಂಶೋಧನೆಗಳ ನಂತರ ಬಹಿರಂಗಪಡಿಸಲಾಗಿದೆ. ಹುಷಾರ್!

ಅಕಸ್ಮಾತ್ ನೀವೇ ಈ ಧೂಮಪಾನ ಚಟಕ್ಕೆ ಅಂದರೆ ಸಿಗರೇಟು, ಬೀಡಿ ಮತ್ತು ಜಗಿಯುವ ತಂಬಾಕಿಗೆ ಬಲಿಯಾಗಿದ್ದಾರೆ, ಅದು ಮುಂದಿನ ದಿನಗಳಲ್ಲಿ ನಿಮ್ಮನ್ನು ಸಾಕಷ್ಟು ಅನಾರೋಗ್ಯಕ್ಕೆ ಸಿಲುಕಿಸುವುದರಲ್ಲಿ  ಸಂದೇಹವಿಲ್ಲ.  ಹೇಗೆಂದರೆ,  ನಿಮ್ಮ ದೇಹದಲ್ಲಿರುವ ಆರೋಗ್ಯಕರ ಜೀವಕಣಗಳನ್ನು ತಂಬಾಕಿನಲ್ಲಿರುವ ರಾಸಾಯನಿಕ ವಸ್ತುಗಳು ವಿಕಾರಗೊಳಿಸುವ ಶಕ್ತಿಯನ್ನು ಹೊಂದಿವೆ ಮತ್ತು ನಿಮ್ಮ ಗರ್ಭಧಾರಣಾ ಶಕ್ತಿಯನ್ನು ಕುಂಠಿತಗೊಳಿಸಿ, ಗರ್ಭಪಾತ ಮತ್ತಿತರ ಅನಾರೋಗ್ಯಕ್ಕೆ ತಳ್ಳುತ್ತವೆ.  ಧೂಮಪಾನದ ಚಟವನ್ನು ಬಿಟ್ಟು ಆರೋಗ್ಯಕರ ಮಕ್ಕಳಿಗೆ ಜನ್ಮನೀಡಿ. ಒಳ್ಳೆಯ ಜೀವನ ನಡೆಸಿ.

ಅಲ್ಲದೆ, ನಿಮ್ಮ ಸಂಸಾರದ ಆರ್ಥಿಕ ವ್ಯವಸ್ಥೆಯನ್ನು ತಂಬಾಕು ಚಟ ಅಲ್ಲೋಲ ಕಲ್ಲೋಲ ಗೊಳಿಸುತ್ತದೆ. ವರದಿಗಳ ಪ್ರಕಾರ,  20ನೇ ವಯಸ್ಸಿನಲ್ಲಿ ಈ ಚಟವನ್ನು ಬೆಳೆಸಿಕೊಂಡಿದ್ದರೆ, ಆ ವ್ಯಕ್ತಿಯು ಅದನ್ನು ಸುಮಾರು 40 ವರ್ಷಗಳು ದಾಸನಾಗಿರುತ್ತಾನೆ, ನಂತರ ತಾನಾಗೇ ತಂದುಕೊಂಡ ರೋಗಗಳಿಗೆ ಬಲಿಯಾಗುತ್ತಾನೆ/ನರಳುತ್ತಾನೆ. ಆಗ ಅವನು ಆ ಚಟವನ್ನು ಬಿಡುವ ಮನಸ್ಸು ಮಾಡಬಹುದು ಅಥವಾ, ನರಳಿಕೊಂಡೇ  ಇನ್ನೂ ಧೂಮಪಾನವನ್ನು ಮುಂದುವರಿಸಿ  ದೊಡ್ಡರೋಗಗಳಿಗೆ ಬಲಿಯಾಗಬಹುದು. ಖರ್ಚು ವೆಚ್ಚಗಳನ್ನು ಗಮನಿಸಿ,  ಉ: ದಿನಂಪ್ರತಿ  1 ಪ್ಯಾಕೆಟ್ ಸಿಗರೇಟು ಸೇದುವ ವ್ಯಕ್ತಿ ಸುಮಾರು ರೂ.150ಖರ್ಚು ಮಾಡುತ್ತಾನೆ, ಅಂದರೆ, 1 ವರ್ಷದಲ್ಲಿ ಸುಮಾರು  ರೂ.54.750, ಅಂದರೆ, 40 ವರ್ಷಗಳಲ್ಲಿ ಆ ವ್ಯಕ್ತಿಯು ಸುಮಾರು ರೂ. 1,90,000 ಹಣವನ್ನು ಸುಟ್ಟಿರುತ್ತಾನೆ. ಅಕಸ್ಮಾತ್ 2 ಪ್ಯಾಕೆಟ್ ಸೇದುವ ದುಶ್ಚಟವಿದ್ದರೆ, ಸುಮಾರು ರೂ. 43,80,000  ಹಣವನ್ನು ಬೆಂಕಿ ಹಾಕಿ ಸುಟ್ಟಿರುತ್ತಾನೆ .  ಇದರ ಜೊತೆಗೆ ಧೂಮಪಾನದಿಂದ ಉಂಟಾಗುವ ಸುಮಾರು ದೊಡ್ಡರೋಗಗಳು ಬಂದರೆ, ಅವುಗಳನ್ನು ಹತ್ತಿಕ್ಕಲು ಇಂತಿಷ್ಟೇ ಹಣ ಖರ್ಚಾಗುವುದು ಎಂದು ಹೇಳಲಿಕ್ಕೆ ಆಗೋಲ್ಲ.  ಆರೋಗ್ಯನೂ ಕೆಡ್ತು ಡುಂ, ಡುಂ,, ದುಡ್ಡೂ ಹೋಯ್ತು, ಡುಂ, ಡುಂ! ಬೇಕಿತ್ತಾ?

ಅಲ್ಲದೆ, ತಂಬಾಕು ಬೆಳೆ ನಮ್ಮ ಪರ್ಯಾವರಣಕ್ಕೆ ಮಾರಕ? ಉ: 1 ಕೆಜಿ ತಂಬಾಕು ಹದ ಮಾಡಲು8 ಕೆಜಿ ಉರುವಲು/ಕಟ್ಟಿಗೆ ಬೇಕೇ ಬೇಕು. ಮೈಸೂರಿನಲ್ಲಿ ತಂಬಾಕು ಮಂಡಳಿಯು ಪ್ರಸ್ತಕ ವರ್ಷದಲ್ಲಿ  100 ಮಿಲಿಯನ್ ಕೆಜಿ ಹೆಚ್ಚುವರಿ ತಂಬಾಕು ಬೆಳೆ ಬೆಳೆಯಲು (ಹಿಂದಿನ ವರ್ಷ – 95 ಮಿಲಿಯನ್ ಕೆಜಿ) ನಿಗದಿ ಪಡಿಸಿದೆ. ಅರ್ಥಾತ್ 100 ಮಿಲಿಯನ್ ಕೆಜಿ ತಂಬಾಕು ಬೆಳೆಯಲು 800 ಮಿಲಿಯನ್ ಕೆಜಿ ಯಷ್ಟು ದಶಕಗಳಿಂದ ಬೆಳೆದು ನಿಂತ ಸುಂದರವಾದ  ಮರಗಳನ್ನು ಕಡಿಯಬೇಕು!  ಈಗಾಗಲೇ ನಮ್ಮ ಪುಟ್ಟ   ಪ್ರಪಂಚವು ಅದರ  ಪರ್ಯಾವರಣದ ಮೇಲೆ ಸಾಕಷ್ಟು ಇಂಗಾಲಾಮ್ಲ ಮತ್ತಿತರ  ಹಸಿರು ಮನೆ ಅನಿಲಗಳ ಹಾವಳಿಯಿಂದ ಅದರ ವಾತಾವರಣವು ಹದಗೆಟ್ಟು, ಅಕಾಲ ಅತಿವೃಷ್ಟಿ, ಅನಾವೃಷ್ಟಿಗಳಿಗೆ ಬಲಿಯಾಗಿ, ಗಾಳಿಯು  ಉಸಿರಾಡಲೇ ಆಗದೆ ಜೀವ ಜಲ ನೀರು ಕಲುಷಿತಗೊಂಡು ಭಯಂಕರ ಗೊಂದಲಗಳಿಗೆ ಒಳಗಾಗಿದೆ. 800 ಲಕ್ಷ ಕೆಜಿ ಯಾರಿಗುಂಟು ಯಾರಿಗಿಲ್ಲ?

ತಂಬಾಕು ಬೆಳೆಗಾರರಿಗೆ ಕೈಮುಗಿದು ಕೇಳುವ ಬಿನ್ನಹ

ಬಿಟ್ಹಾಕಿ ತಂಬಾಕು, ಪರ್ಯಾಯ ಬೆಳೆಗಳನ್ನು ಬೆಳೆಸಿ, ನಾಡಿನ ಆಹಾರ ಭದ್ರತೆಯನ್ನು ಕಾಪಾಡಿ, ಮಣ್ಣಿನ ಸವಕಳಿಯನ್ನು ತಡೆಯಿರಿ,  ಫಲವತ್ತಾದ ಭೂಮಿಯನ್ನು ಸದುಪಯೋಗಗೊಳಿಸಿಕೊಳ್ಳಿ, ಭೂಮಿ ತಾಯಿಯ ಸೆರಗನ್ನು ಮಲಿನಗೊಳಿಸಬೇಡಿ, ಮುಂದಿನ ಪೀಳಿಗೆಗೂ ಬೇಕಾಗುವ ಮಣ್ಣನ್ನು ರಾಸಾಯನಿಕ ಗೊಬ್ಬರಗಳಿಂದ  ವಿಷಪೂರಿತ ಮಾಡಬೇಡಿ.    ನೀವು ಬೆಳೆಯುವ ತಂಬಾಕಿನ ಸೇವನೆಯಿಂದ ಬರುವ ಭಯಂಕರ ಖಾಯಿಲೆ ಕಸಾಲೆಗಳಿಗೆ ತುತ್ತಾಗಿ ವಾರ್ಷಿಕ 10,00,000 ಜನರು ಅಕಾಲ ಮರಣಕ್ಕೆ ಒಳಗಾಗುತ್ತಿದ್ದಾರೆ, ಆ  ಸಂಸಾರಗಳ  ಮನೆ ಮಂದಿಯ ಶಾಪಕ್ಕೆ ತುತ್ತಾಗಬೇಡಿ. ಬದುಕಿ, ಬಾಳಿ, ಬಾಳಲು ಬಿಡಿ, ನೀವು  ಮಾತ್ರ ಬದುಕಿ ಮತ್ತೊಬ್ಬರ ಬಾಳನ್ನು  ಹಾಳು ಮಾಡಬೇಡಿ. ನಮಗೆ ಗೊತ್ತು ತಂಬಾಕು ಬೆಳೆಗಾರರು ಸುಲಭ  ಸಾಲವೆಂಬ ಶೂಲಕ್ಕೆ ತುತ್ತಾಗಿ, ಸಾಲಗಳನ್ನು ತೀರಿಸಲೂ ಆಗದೆ, ಹೊರಬರಲೂ ಆಗದೆ ನರಳುತ್ತಿದ್ದಾರೆ ಮತ್ತು ನಮ್ಮ ಅಣ್ಣ ತಮ್ಮಂದಿರೇ ಆದ ತಂಬಾಕು ಬೆಳೆಗಾರರೂ ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಮ್ಮ ಕೃಷಿ ಕ್ಷೇತ್ರದ  ಕ್ಷಮಿಸಲಾಗದ ಮಾನವ ನಿರ್ಮಿತ ದುರಂತ.  ಇದನ್ನು ಸರಿಪಡಿಸ ಬೇಕಾದರೆ, ಮಹಿಳೆಯರ ಪಾತ್ರ ಮಹತ್ತರವಾದದ್ದು.  ಆದುದರಿಂದ, ಮಹಿಳೆಯರೇ ಅದರಲ್ಲೂ, ಯುವತಿಯರೇ, ತಂಬಾಕಿನಿಂದಾಗುವ ಈ ಮೇಲ್ಕಂಡ ಎಲ್ಲದುರಂತಗಳನ್ನು ತಡೆಯಲು ನಿಮ್ಮಿಂದಲೂ ಸಾಧ್ಯ, ನೀವು ವಹಿಸುವ ಪಾತ್ರ ಮಹತ್ತರವಾದದ್ದು ಮತ್ತು ಮುಂದಿನ ಪೀಳಿಗೆಗಳ ಅಳಿವು, ಉಳಿವು ನಿಮ್ಮ ಕೈಯಲ್ಲಿದೆ. ಕಾರ್ಯಗತರಾಗಿ.

ಕ್ಯಾನ್ಸರ್ ರೋಗಿಗಳ ಸಹಾಯಕ ಸಂಸ್ಥೆ ಸಲಹೆಗಾರ  ವಸಂತಕುಮಾರ್ ಮೈಸೂರುಮಠ

Leave a Reply

comments

Related Articles

error: