ಪ್ರಮುಖ ಸುದ್ದಿ

ಯುಜಿಡಿ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಎಸ್‍ಡಿಪಿಐ ಆಗ್ರಹ

ರಾಜ್ಯ(ಮಡಿಕೇರಿ) ಜೂ.26 :- ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಡೆದ ಯುಜಿಡಿ ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಗರಸಭಾ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು ಇಲ್ಲಿಯವರೆಗೆ ಅಗತ್ಯ ಕ್ರಮ ಕೈಗೊಂಡಿಲ್ಲವೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಮುಂದಿನ 15 ದಿನಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್. ಅಬೂಬಕ್ಕರ್, ಯುಜಿಡಿ ಕಾಮಗಾರಿಯಿಂದ ರಸ್ತೆಗಳು ಹದಗೆಟ್ಟು ಮಳೆಗಾಲದಲ್ಲಿ ಸಂಚಾರ ಕಷ್ಟಸಾಧ್ಯವಾಗಿದೆ, ನಗರದ ಗಣಪತಿ ಬೀದಿ, ರಾಣಿಪೇಟೆ, ಮಲ್ಲಿಕಾರ್ಜುನ ನಗರಕ್ಕೆ ತೆರಳುವ ರಸ್ತೆಗಳು ನಡೆದಾಡಲು ಸಹ ಅಯೋಗ್ಯವಾಗಿ ಪರಿಣಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹದೇವಪೇಟೆ ರಸ್ತೆಯ ಕಾಂಕ್ರಿಟೀಕರಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ನಗರಸಭಾ ಸಾಮಾನ್ಯ ಸಭೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ. ಆದರೆ, ಇಲ್ಲಿಯವರೆಗೆ ಪೌರಾಯುಕ್ತರಾಗಲಿ, ಜಿಲ್ಲಾಡಳಿತವಾಗಲಿ ಅಗತ್ಯ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಮಹದೇವಪೇಟೆ ರಸ್ತೆಯ ಕಾಂಕ್ರಿಟೀಕರಣದ ಬಳಿಕ ಮೂರುವರೆ ವರ್ಷ ಕಳೆದಿದ್ದರು ರಸ್ತೆ ಬದಿಗೆ ಇಂಟರ್ ಲಾಕ್ ಅಳವಡಿಸುವ ಕಾರ್ಯವಾಗಲಿ, ಚರಂಡಿ ಕಾಮಗಾರಿಗಳನ್ನಾಗಲಿ ಇಲ್ಲಿಯವರೆಗೆ ನಡೆಸಿಲ್ಲ. ಇದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ಬಗ್ಗೆ ಪೌರಾಯುಕ್ತರು ಗಮನ ಹರಿಸಿ ಅಗತ್ಯ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕಳೆದ ನಾಲ್ಕು ತಿಂಗಳಿನಿಂದ ರಾಜ್ಯದಲ್ಲಿ ದಲಿತರ ಹಾಗೂ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಇದನ್ನು ಎಸ್‍ಡಿಪಿಐ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ಇವೆಲ್ಲವನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವುದು ವಿಷಾದನೀಯ. ಇಂತಹ ಅಮಾನವೀಯ ಕೃತ್ಯವನ್ನು ಸರ್ಕಾರ ನಿಗ್ರಹಿಸಬೇಕೆಂದು ಆಗ್ರಹಿಸಿದರು.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ದಲಿತ ಸಮುದಾಯದ ಪ್ರಸಾದ್ ಎಂಬಾತನ ಬೆತ್ತಲೆ ಮೆರವಣಿಗೆ ಸೇರಿದಂತೆ, ರಾಮನಗರದಲ್ಲಿ ಸೈಯ್ಯದ್ ತೌಸಿಫ್ ಎಂಬಾತನ ಮೇಲೆ ಪೊಲೀಸ್ ದೌರ್ಜನ್ಯ, ಶಿರಸಿಯಲ್ಲಿ ಅಸ್ಲಂ ಎಂಬಾತನ ಹತ್ಯೆ, ದಾವಣಗೆರೆಯ ಹೊನ್ನಾಳಿಯ ದಯಾನತ್ ಖಾನ್ ಹತ್ಯೆ ಹೀಗೆ ವಿವಿಧ ಅಮಾನವೀಯ ಪ್ರಕರಣಗಳು ನಡೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ದಲಿತ ಮತ್ತು ಅಲ್ಪಸಂಖ್ಯಾತರ ಮೇಲಿನ ಅಮಾನವೀಯ ಕೃತ್ಯಗಳನ್ನು ತಡೆಯಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.

ಎಸ್‍ಡಿಪಿಐ ನಗರಾಧ್ಯಕ್ಷ ಮನ್ಸೂರ್ ಆಲಿ ಮಾತನಾಡಿ, ಕಳೆದ ಸಾಲಿನ ಪ್ರಾಕೃತಿಕ ವಿಕೋಪದಿಂದ ಮಡಿಕೇರಿ ನಗರ ವ್ಯಾಪ್ತಿಯ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ತೊಂದರೆಗೆ ಒಳಗಾದ ಹಾಗೂ 94ಸಿ ಮತ್ತು 94ಸಿಸಿಯಡಿ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವವರಿಗೆ ಇಲ್ಲಿಯವರೆಗೆ ನೆರವು ದೊರಕಿಲ್ಲ. ಈ ಬಗ್ಗೆ ಆಡಳಿತ ವ್ಯವಸ್ಥೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಈ ಬಾರಿ ಕೂಡ ಮಳೆಹಾನಿ ಸಂಭವಿಸಿದರೆ ಅಗತ್ಯ ನೆರವು ಒದಗಿಸಲು ಎಸ್‍ಡಿಪಿಐ ವತಿಯಿಂದ 100ರಿಂದ 150 ಮಂದಿಯ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಈ ತಂಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ 9880908030 ಸಂಖ್ಯೆಗೆ ಕರೆ ಮಾಡಿದಲ್ಲಿ ತಂಡ ಜಿಲ್ಲೆಯ ಯಾವುದೇ ಪ್ರದೇಶಕ್ಕೂ ತೆರಳಿ ತನ್ನ ನೆರವಿನ ಹಸ್ತ ನೀಡಲಿದೆ ಎಂದು ಮನ್ಸೂರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಕೆ.ಜಿ.ಪೀಟರ್ ಹಾಗೂ ಕಾರ್ಯದರ್ಶಿ ಅಹಮ್ಮದ್ ಕಬೀರ್ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: