ಪ್ರಮುಖ ಸುದ್ದಿ

ಕಾಡಾನೆ ದಾಳಿಯಿಂದ ವಿದ್ಯಾರ್ಥಿಗೆ ಗಂಭೀರ ಗಾಯ : ಬಿಟ್ಟಂಗಾಲ ಗ್ರಾಮದಲ್ಲಿ ಘಟನೆ

ರಾಜ್ಯ(ಮಡಿಕೇರಿ) ಜೂ.27 :- ಕಾಡಾನೆಯೊಂದರ ಹಠಾತ್ ದಾಳಿಗೆ ಸಿಲುಕಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಗಂಭೀರ ಸ್ವರೂಪದಲ್ಲಿ ಗಾಯಗೊಂಡು, ಆತನ ಸಹಪಾಠಿಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ಘಟನೆ ನಗರದಂಚಿನ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ.
ಬಿಟ್ಟಂಗಾಲ ಗ್ರಾಮದ ನಿವಾಸಿ ಬಿ.ಎ.ಸುಭಾಷ್ ಚಂದ್ರ ಮತ್ತು ನೇತ್ರಾವತಿ ದಂಪತಿಗಳ ಪುತ್ರ ಚಂದನ್ ಬಿ.ಎಸ್.(11) ಎಂಬಾತನೆ ಗಾಯಗೊಂಡ ವಿದ್ಯಾರ್ಥಿ. ಕಾಡಾನೆ ದಾಳಿಯಿಂದ ಈತನ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಿಟ್ಟಂಗಾಲ ಗ್ರಾಮದ ಅಂಬಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಬೆಳಗ್ಗೆ ಸುಭಾಷ್‍ಚಂದ್ರ ಅವರ ಮಕ್ಕಳಾದ ಚಂದನ್, ಈತನ ಸಹೋದರ ಕೀರ್ತನ್, ತಂಗಿ ಶಾಲಿನಿ ಮತ್ತು ಸುಭಾಷ್ ಚಂದ್ರ ಅವರ ತಮ್ಮನ ಮಗ ಪವನ್ ಅವರು ತೆರಳುತ್ತಿದ್ದರು. ಇವರು ಶಾಲೆಗೆ ತೆರಳುವ ಮಾರ್ಗದ ಸಮೀಪದ ಆಲ್ಬರ್ಟ್ ಎಂಬವರ ತೋಟದಲ್ಲಿ ಐದು ಕಾಡಾನೆಗಳ ಹಿಂಡು ಬೀಡುಬಿಟ್ಟಿತ್ತು ಎನ್ನಲಾಗಿದೆ.
ಮಕ್ಕಳು ಶಾಲೆಯತ್ತ ಸಾಗುತ್ತಿದ್ದ ಸಂದರ್ಭ ಹಠಾತ್ತನೆ ಕಾಡಾನೆಯೊಂದು ಮಕ್ಕಳ ಮೇಲೆ ದಾಳಿ ನಡೆಸಿ, ಚಂದನ್‍ನನ್ನು ಸೊಂಡಿಲಿನಿಂದ ಎತ್ತಿ ಒಗೆದಿದೆ. ಈ ಹಂತದಲ್ಲಿ ಭಯಭೀತರಾದ ಸಹಪಾಠಿಗಳು ಜೋರಾಗಿ ಕಿರುಚಿಕೊಂಡು ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿ, ಸುತ್ತಮುತ್ತಲಿನ ಮನೆಮಂದಿಗೆ ವಿಷಯ ಮುಟ್ಟಿಸಿದರು.
ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಗಾಯಗೊಂಡು ಬಿದ್ದಿದ್ದ ಚಂದನ್‍ನನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಮಂಗಳೂರಿಗೆ ಕರೆದೊಯ್ಯಲಾಯಿತು.
ಅರಣ್ಯಾಧಿಕಾರಿಗಳ ಭೇಟಿ
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಕೆ.ಗೋಪಾಲ್ ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿ ಚಂದನ್‍ನ ಚಿಕಿತ್ಸಾ ವೆಚ್ಚವನ್ನು ಇಲಾಖೆಯ ವತಿಯಿಂದ ಭರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮಸ್ಥರ ಆಕ್ರೋಶ

ಬಿಟ್ಟಂಗಾಲ ಗ್ರಾಮ ವ್ಯಾಪ್ತ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿಲ್ಲ. ಕಾಡಾನೆಗಳ ದಾಳಿಗೆ ಒಳಗಾದವರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಗ್ರಾಮಸ್ಥರಾದ ದಾಮೋದರ್, ಸಣ್ಣಪ್ಪ, ರತನ್, ನವೀನ್ ಮಂದಣ್ಣ, ಮುತ್ತಪ್ಪ, ಸಂಜು ಯೋಗೇಶ್ ಮೊದಲಾದವರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: