ಪ್ರಮುಖ ಸುದ್ದಿ

ಅರಣ್ಯ ಹಕ್ಕು ಕಾಯ್ದೆ : ಎಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಜಿಲ್ಲಾಧಿಕಾರಿ ಸೂಚನೆ

ರಾಜ್ಯ(ಮಡಿಕೇರಿ) ಜೂ.27 :- ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯ ಅರಣ್ಯ ವಾಸಿಗಳಿಗೆ ಸಮರ್ಪಕ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಅನುಸೂಚಿತ ಜಾತಿ ಮತ್ತು ಪಂಗಡಗಳ ದೌರ್ಜನ್ಯ ನಿಯಂತ್ರಣ ನಿಯಮ ರೀತ್ಯಾ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿ ಸ್ಮಶಾನಕ್ಕೆ ಬದಲಿ ಪರ್ಯಾಯ ಜಾಗ ಗುರುತಿಸುವಂತೆ ವಿರಾಜಪೇಟೆ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಸೋಮವಾರಪೇಟೆ ತಾಲ್ಲೂಕಿನ ನಿಡ್ತ ಗ್ರಾ.ಪಂ.ವ್ಯಾಪ್ತಿಯ ಸ್ಮಶಾನದ ಸಮಸ್ಯೆಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಸೋಮವಾರಪೇಟೆ ತಾ.ಪಂ.ಇಒಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಕಳೆದ ಬಾರಿ ನಡೆದ ಸಭೆಯ ಅನುಪಾಲನಾ ವರದಿ ಪ್ರಗತಿ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ಪಡೆದರು.
ಜೇನು ಕುರುಬರಿಗೆ ಅವಶ್ಯವಿರುವ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಅಗತ್ಯ ಕ್ರಮಕೈಗೊಂಡು ಕೃಷಿ ಚಟುವಟಿಕೆಗಳಿಗೆ ನೆರವು ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ ಅರ್ಹ ಅರಣ್ಯ ವಾಸಿಗಳಿಗೆ ಅನುಕೂಲವಾಗಬೇಕು. ಹಲವು ದಶಕಗಳಿಂದ ಅರಣ್ಯದಲ್ಲಿಯೇ ವಾಸವಿರುವ ಮೂಲ ನಿವಾಸಿಗಳ ಹಕ್ಕುಗಳ ರಕ್ಷಣೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಐಟಿಡಿಪಿ ಅಧಿಕಾರಿ ಶಿವಕುಮಾರ್‍ಗೆ ತಿಳಿಸಿದರು.
ಸಮಿತಿಯ ಸದಸ್ಯರಾದ ಮುತ್ತಪ್ಪ ಅವರು ಮಾತನಾಡಿ ನಾಪೋಕ್ಲು ಪಂಚಾಯತ್ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಹಾಡಿಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸಬೇಕು. ಹಾಡಿಯ ಪ್ರದೇಶಕ್ಕೆ ಸಂಚಾರಿ ನ್ಯಾಯಬೆಲೆ ಅಂಗಡಿ, ರಸ್ತೆ ವ್ಯವಸ್ಥೆ, ಅಂಬೇಡ್ಕರ್ ಭವನ ಹಾಗೂ 94 ಸಿಸಿ ರಡಿಯಲ್ಲಿ ಹಕ್ಕು ಪತ್ರ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ವ್ಯಾಪ್ತಿಯಲ್ಲಿ ಇರುವ ಹಾಡಿಗಳಲ್ಲಿ ವಾಸಿಸುವ ಕುಟುಂಬಗಳಿಗೆ ತುರ್ತಾಗಿ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಿತಿಯ ಸದಸ್ಯರಾದ ಸುಕುಮಾರ್, ಜೇನುಕುರುಬರ ಕೆಂಪ ಅವರು ಪರಿಶಿಷ್ಟರ ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ, ತಹಶೀಲ್ದಾರರಾದ ಗೋವಿಂದರಾಜು, ಕುಸುಮ, ತಾ.ಪಂ.ಇಒಗಳಾದ ಲಕ್ಷ್ಮಿ, ಸುನಿಲ್ ಕುಮಾರ್ ಜಯಣ್ಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಇದ್ದರು.
ಪ್ರಗತಿ ಪರಿಶೀಲನಾ ಸಭೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗಾಗಿ ವಿವಿಧ ಇಲಾಖೆಯಲ್ಲಿ ಮೀಸಲಿರುವ ಅನುದಾನವನ್ನು ಕಾಲ ಮಿತಿಯೊಳಗೆ ವಿನಿಯೋಗಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ ಕಾರ್ಯಕ್ರಮದಡಿ ಸಾಧಿಸಿದ ಪ್ರಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕೃಷಿ, ತೋಟಗಾರಿಕೆ, ಪಶುಪಾಲನೆ, ಪಂಚಾಯತ್ ರಾಜ್, ಅರಣ್ಯ, ಆರೋಗ್ಯ, ವಸತಿ, ಲೋಕೋಪಯೋಗಿ ಹೀಗೆ ನಾನಾ ಇಲಾಖೆಗಳಲ್ಲಿ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ವಿದ್ಯಾರ್ಥಿ ನಿಲಯಗಳಿಗೆ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಅವರು ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 10 ಕೋಟಿ ರೂ ನಿಗಧಿಯಾಗಿದ್ದು, ಸೂಕ್ತ ಸ್ಥಳ ಗುರ್ತಿಸಬೇಕಿದೆ ಎಂದರು.
ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ವಿರಾಜಪೇಟೆ ಬಳಿ ವಾಲ್ಮೀಕಿ ಭವನ ನಿರ್ಮಾಕ್ಕೆ ಉತ್ತಮ ಜಾಗ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.
ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಎಸ್‍ಸಿಎಸ್‍ಪಿ/ ಟಿಎಸ್‍ಪಿ ಯೋಜನಾ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ ಇಇ ಇಬ್ರಾಹಿಂ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ತಮ್ಮಯ್ಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರ್, ತಹಶೀಲ್ದಾರ್ ಕುಸುಮ, ಗೋವಿಂದರಾಜು, ತಾ.ಪಂ.ಇಒಗಳಾದ ಸುನಿಲ್ ಕುಮಾರ್, ಲಕ್ಷ್ಮೀ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಕುಮಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಬಾಯಿ, ಕೈಮಗ್ಗ ಮತ್ತು ಜವುಳಿ ಇಲಾಖೆಯ ಗುರುಸ್ವಾಮಿ, ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾದ ರವಿಕುಮಾರ್ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: