ಮೈಸೂರು

ವೈಚಾರಿಕ ಚಿಂತನೆ ಬೆಳೆಸಿಕೊಳ್ಳಲು ಬುದ್ಧನ ಧಮ್ಮದೊಂದಿಗೆ ವಿಜ್ಞಾನವನ್ನು ಓದಿ : ಕೆ.ಟಿ.ಶಿವಪ್ರಸಾದ್ ಕರೆ

ವಿದ್ಯಾರ್ಥಿಗಳು ಬುದ್ಧನ ಧಮ್ಮದೊಂದಿಗೆ ವಿಜ್ಞಾನವನ್ನು ಓದಿಕೊಂಡರೆ ವೈಚಾರಿಕ ಚಿಂತನೆಯನ್ನು ಬೆಳೆಸಿಕೊಳ್ಳಬಹುದು ಎಂದು ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್ ಅಭಿಪ್ರಾಯಪಟ್ಟರು.

ಶನಿವಾರ ಕಲಬುರಗಿಯ ಪಾಲಿ ಇನ್ಸ್‍ಟಿಟ್ಯೂಟ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಂಯುಕ್ತಾಶ್ರಯದಲ್ಲಿ  ಮೈಸೂರಿನ ಮಾನಸ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಆಯೋಜಿಸಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಬುದ್ಧ ಮತ್ತು ಆತನ ಧಮ್ಮ ಕೃತಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಬಳಿಕ  ಮಾತನಾಡಿದ ಅವರು,  ಬುದ್ಧ ಜಗತ್ತು ಕಂಡ ಅತ್ಯಂತ ಚಿಂತನಾಶೀಲ ಹಾಗೂ ಶ್ರೇಷ್ಠ ವ್ಯಕ್ತಿ. ಅಂದಿನ ಕಾಲಘಟ್ಟದಲ್ಲೇ ವಿಜ್ಞಾನ ಸೇರಿದಂತೆ ಎಲ್ಲಾ ವಿಷಯವನ್ನೂ ತಿಳಿದುಕೊಂಡಿದ್ದ. ಬುದ್ಧ ಹೇಳಿದ್ದ ಅನೇಕ ವೈಜ್ಞಾನಿಕ ಸಂಗತಿಗಳನ್ನು ಇಂದು ವಿಜ್ಞಾನಿಗಳು ದೃಢಪಡಿಸುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಆಲೋಚನಾಕ್ರಮಗಳನ್ನು ಬೆಳೆಸಿಕೊಳ್ಳಬೇಕಾದರೆ ಬುದ್ಧನನ್ನು ಓದಿಕೊಳ್ಳಬೇಕು ಎಂದು ಹೇಳಿದರು.

ಬುಧ್ಧನ ಕುರಿತು ಅಂಬೇಡ್ಕರ್ ಅವರು ರಚಿಸಿರುವ ಈ ಗ್ರಂಥ ಅತ್ಯಂತ ಶ್ರೇಷ್ಠ ಹಾಗೂ ವಿಶಿಷ್ಟವಾದುದು. ಅಶ್ವಘೋಷನ ಬುದ್ಧಚರಿತವನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದು, ಗೌತಮನ ಬಾಲ್ಯದಿಂದ ಹಿಡಿದು ಬುದ್ಧನಾಗುವವರೆಗೆ ಎಲ್ಲಾ ವಿಷಯಗಳನ್ನು ಕೃತಿಯಲ್ಲಿ ತಿಳಿಸಿದ್ದಾರೆ. ಜತೆಗೆ ಕೃತಿಯಲ್ಲಿ ಮಧ್ಯಮ ಮಾರ್ಗದ ಕುರಿತು ಏನನ್ನೂ ಹೇಳಿಲ್ಲ. ಪರಿವರ್ತನೆ ನಿರಂತರ ಪ್ರಕ್ರಿಯೆಯಾಗಿದ್ದು ಅದು ನಿಂತ ನೀರಲ್ಲ. ಸಮಯ ಹಾಗೂ ಜಾಗವನ್ನು ನಾವು ಮಾಡಿಕೊಂಡಿದ್ದು ಯಾವುದೂ ಶಾಶ್ವತವಲ್ಲ. ಎಲ್ಲವೂ ಪರಿವರ್ತನೆಯಾಗುತ್ತಲೇ ಇರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚೆಚ್ಚು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಸಂಶೋಧನಾ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಬುದ್ಧ ಹಾಗೂ ಅಂಬೇಡ್ಕರ್ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲಿ ಇನ್ಸ್‍ಟಿಟ್ಯೂಟ್ ಅಧ್ಯಕ್ಷ ರಾಹುಲ್ ಖರ್ಗೆ, ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಪಾಲಿ ಇನ್ಸ್‍ಟಿಟ್ಯೂಟ್‍ನ ಗೌರವ ನಿರ್ದೇಶಕ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್, ಮೈಸೂರು  ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ  ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: