ಮೈಸೂರು

ಮದ್ಯಪಾನ ಮಾಡಿ ಮಹಿಳೆಯರೊಂದಿಗೆ ಪೊಲೀಸ್ ಪೇದೆ ಅಸಭ್ಯ ವರ್ತನೆ : ದೂರು

ಮೈಸೂರು,ಜೂ.27:- ಸರ್ಕಾರಿ ಬಸ್ಸೊಂದು ಖಾಸಗಿ ಕಾರಿಗೆ ಡಿಕ್ಕಿ ಹೊಡೆದ ವಿಷಯಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರತ  ಪೊಲೀಸ್ ಪೇದೆಯೊಬ್ಬರು ಕಾರಿನಲ್ಲಿದ್ದ ಮಹಿಳೆಯರೊಡನೆ ಅಸಭ್ಯ ರೀತಿಯಲ್ಲಿ ವರ್ತಿಸಿ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ಅಂತರಸಂತೆ ಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಎಚ್ ಡಿ ಕೋಟೆ ಸರಗೂರಿನ ರಾಘವೇಂದ್ರ ಎಂಬವರು ತಮ್ಮ ಕುಟುಂಬದ ಸದಸ್ಯರೊಡಗೂಡಿ ವಿಹಾರಕ್ಕೆಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂಲಕ ನೆರೆಯ ಕೇರಳ ಗಡಿ ಭಾಗದ ಬಾವಲಿ ತಲುಪಿ ಹಿಂದಿರುಗುತ್ತಿದ್ದರು. ಈ ಸಂದರ್ಭ ಸರ್ಕಾರಿ ಬಸ್ಸೊಂದು ಆಕಸ್ಮಿಕವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ.  ಈ ವಿಷಯವಾಗಿ ದೂರು ನೀಡಲು ರಾಘವೇಂದ್ರ ಮತ್ತವರ ಕುಟುಂಬದ ಮಹಿಳೆಯರು ಅಂತರಸಂತೆ ಔಟ್ ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಎಂಬ ಪೇದೆ ಬಸ್ ಚಾಲಕನ ಪರವಾಗಿ ಮಾತನಾಡಿದರು. ಮಹಿಳೆಯರೊಡನೆ ಮಾತಿಗಿಳಿದು ಅಸಭ್ಯವಾದ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಅಸಭ್ಯ ರೀತಿಯಲ್ಲಿ ವರ್ತಿಸಿದರೆಂದು ಮಹಿಳೆಯರು ದೂರಿದ್ದಾರೆ.

ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶ್ರೀನಿವಾಸ್ ಎಂಬ ಪೇದೆ ಮದ್ಯಪಾನ ಮಾಡಿದ್ದು ಮನಬಂದಂತೆ ವರ್ತಿಸಿದ್ದರು.

ಮದ್ಯಪಾನ ಮಾಡಿ ಮಹಿಳೆಯರೊಡನೆ ಅಸಭ್ಯತೆಯಲ್ಲಿ ವರ್ತಿಸಿದ ಪೊಲೀಸ್ ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಘವೇಂದ್ರ ಮತ್ತವರ ಕುಟುಂಬದವರು ಎಚ್ ಡಿ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: