ಮೈಸೂರು

ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಎಸ್.ಎ. ರಾಮದಾಸ್ : ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ತರಾಟೆ

ಮೈಸೂರು,ಜೂ.27:- ಇಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ    ಎಸ್.ಎ. ರಾಮದಾಸ್ ಅವರು ವಾರ್ಡ್ ನಂ -59 ರ “ಎಂ” ಬ್ಲಾಕ್‍ನಲ್ಲಿರುವ ಗಣಪತಿ ದೇವಸ್ಥಾನದ ಉದ್ಯಾನವನದಿಂದ ಜನಸ್ಪಂದನಾ ಯಾತ್ರೆಯನ್ನು ಪ್ರಾರಂಭಿಸಿ ಐಶ್ವರ್ಯ ನಗರ, ಬನಶಂಕರಿ ದೇವಸ್ಥಾನ, ಪೂಜಾ ಬೇಕರಿ, ಸಾ.ರಾ ಪೆಟ್ರೋಲ್ ಬಂಕ್ ಎದುರು, ನಾಗಮ್ಮ ಕಲ್ಯಾಣ ಮಂಟಪ, ವಿವೇಕಾನಂದ ವೃತ್ತ, ನಿಮಿಷಾಂಬ ಮತ್ತು ಹುಡ್ಕೋ ಬಡಾವಣೆ ಗಳ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಯು.ಜಿ.ಡಿ ಸಮಸ್ಯೆ, ವಿದ್ಯುತ್ ಕಂಬಗಳ ಸಮಸ್ಯೆ, ಸ್ವಚ್ಛತೆಯ ಸಮಸ್ಯೆ ಹೀಗೆ ಹಲವು ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಈ ಬಗ್ಗೆ ವರದಿಯನ್ನು ನೀಡುವಂತೆಯೂ ತಿಳಿಸಿದರು.

ಈ ಮಧ್ಯೆ ಹುಡ್ಕೋ ಬಡಾವಣೆಯಲ್ಲಿ ಹಲವು ವರ್ಷಗಳಿಂದ ಒಳ ಚರಂಡಿ ಸಮಸ್ಯೆ ಇರುವುದಾಗಿ ಸ್ಥಳೀಯ ನಿವಾಸಿಗಳು ಶಾಸಕರ ಬಳಿ ದೂರನ್ನು ನೀಡಿದಾಗ ಶಾಸಕರು ಸ್ಥಳದಲ್ಲೇ ಇದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಹಾಲಿ ಇರುವ 4 ಇಂಚಿನ ಕೊಳವೆಯನ್ನು 8 ಇಂಚು ಒಳಚರಂಡಿ ಕೊಳವೆ ಮಾರ್ಗ ಬದಲಾಯಿಸುವಂತೆ ಸೂಚಿಸಿದರು. ಇದಲ್ಲದೇ ಈ ಬಡಾವಣೆಯಲ್ಲಿ ಕಳ್ಳತನ ಹೆಚ್ಚಾಗಿ ನಡೆಯುತ್ತಿದ್ದು, ಪೆಟ್ರೋಲ್, ಬ್ಯಾಟರಿ, ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿರುದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದು, ಕುವೆಂಪುನಗರ ಪೊಲೀಸ್ ಠಾಣೆಯ ನಿರೀಕ್ಷರಿಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕೂಡಲೇ ಕಲ್ಪಿಸಬೇಕೆಂದು ಸೂಚಿಸಿದರು.

ಪೊಲೀಸ್ ಇಲಾಖೆಯಿಂದ ಎ.ಎಸ್.ಐ ಆಗಿ ನಿವೃತ್ತಿ ಹೊಂದಿದ್ದ   ಮುತ್ತು ಶೆಟ್ಟಿ ಅವರು ಎಂ. ಬ್ಲಾಕ್ ನಲ್ಲಿರುವ ಭಾರತಾಂಬೆಯ ಉದ್ಯಾನವನದಲ್ಲಿ ಆಗುತ್ತಿರುವ ತೊಂದರೆಗಳಿಗೆ ಕಡಿವಾಣ ಹಾಕಲು ಶಾಸಕರು ಅನುಮತಿ ನೀಡುವುದಾದರೇ ಈ ಉದ್ಯಾನವನದಲ್ಲಿ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುವುದಾಗಿ ಶಾಸಕರಲ್ಲಿ ತಿಳಿಸಿದರು.  ಇದಕ್ಕೆ ನಗರ ಪಾಲಿಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಇಂತಹವರ ಸೇವೆಯು ಅತ್ಯಮೂಲ್ಯವಾಗಿದ್ದು, ಇವರ ಸಮಾಜಮುಖಿ ಸೇವೆಗೆ ಅಭಿನಂದನೆಯನ್ನು ತಿಳಿಸಿ ಇವರ ಸೇವೆಯನ್ನು ಪಡೆಯುವ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ವಿವೇಕಾನಂದ ವೃತ್ತದಿಂದ ರೈಲ್ವೆ ನಿಲ್ದಾಣಕ್ಕೆ ಬಸ್ ವ್ಯವಸ್ಥೆಯಿದ್ದು, ಆದರೆ ರೈಲ್ವೆ ನಿಲ್ದಾಣದಿಂದ ವಿವೇಕಾನಂದ ವೃತ್ತಕ್ಕೆ ಯಾವುದೇ ಬಸ್ ವ್ಯವಸ್ಥೆಯ ಸೌಲಭ್ಯವು ಇಲ್ಲದಿರುವುದರ ಬಗ್ಗೆ ಸಾರ್ವಜನಿಕರು ಶಾಸಕರ ಬಳಿ ಅಹವಾಲನ್ನು ನೀಡಿದರು. ಈ ಬಗ್ಗೆ ಸ್ಥಳದಲ್ಲೇ ಇದ್ದ ಬಸ್ ಡಿಪೋ ಮ್ಯಾನೇಜರ್‍ಗೆ ಕೂಡಲೇ ಸದರಿ ಸಮಸ್ಯೆಗೆ ಸ್ಪಂದಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿ ಈ ಬಗ್ಗೆ ಒಂದು ವಾರದೊಳಗೆ ವರದಿಯನ್ನು ನೀಡುವಂತೆ ಸೂಚಿಸಿದರು.

ವಿವೇಕಾನಂದ ವೃತ್ತದಿಂದ ಕರ್ನಾಟಕ ಬ್ಯಾಂಕ್ ಮುಖ್ಯ ರಸ್ತೆಯ ಎರಡು ಬದಿಯಲ್ಲೂ ವಾಹನಗಳನ್ನು ನಿಲ್ಲಿಸುತ್ತಿದ್ದು,  ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದಾಗಿ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸ್ಥಳದಲ್ಲೇ ಇದ್ದ ಕುವೆಂಪುನಗರ ಸಂಚಾರಿ ಪೊಲೀಸ್ ನಿರೀಕ್ಷಕರಿಗೆ ಈ ಸಮಸ್ಯೆಯನ್ನು ಬಗೆಹರಿಸಿ ಕೂಡಲೇ ಸುಗಮ ರೀತಿಯಲ್ಲಿ ಸಂಚಾರವಾಗುವಂತೆ ಕ್ರಮಕೈಗೊಳ್ಳಲು ಸೂಚಿಸಿದರು. ವಿವೇಕಾನಂದ ನಗರದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿದ ಶಾಸಕರು ಅಲ್ಲಿನ ಓದುಗರ ಸಮಸ್ಯೆಯನ್ನು ಆಲಿಸಿ ಮಾದರಿ ಗ್ರಂಥಾಲಯವನ್ನಾಗಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸದ್ಯದ ಪರಿಸ್ಥಿತಿಯಲ್ಲಿ ಗ್ರಂಥಾಲಯಕ್ಕೆ ನೀರಿನ ನಲ್ಲಿಯ ವ್ಯವಸ್ಥೆಯನ್ನು ಕೋರಲಾಗಿ ಸ್ಥಳದಲ್ಲಿದ್ದ ವಾಣಿ ವಿಲಾಸ ಅಧಿಕಾರಿಗಳಿಗೆ  ಕೂಡಲೇ ಕಲ್ಪಿಸಿಕೊಡುವಂತೆ ಸೂಚಿಸಿದರು.

ಅನುಮೋದಿತ ನಕ್ಷೆಯನ್ನು ಹಾಗೂ ಕಟ್ಟಡ ಪರವಾನಗಿಯನ್ನು ಪಡೆಯದೆ ಯಾವುದೇ ವಾರ್ಡ್ ಮತ್ತು ವಲಯಗಳಲ್ಲಿ (ಜೋನ್) ಕಟ್ಟಡಗಳು ನಿರ್ಮಾಣವಾದಲ್ಲಿ ಅಂತಹ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಆಯಾ ಪ್ರದೇಶದ ಇಂಜಿನಿಯರ್‍ಗಳು, ಸಹಾಯಕ ಆಯುಕ್ತರುಗಳು ಮತ್ತು ಅಭಿವೃದ್ಧಿ ಅಧಿಕಾರಿಗಳನ್ನು ಜವಾಬ್ದಾರಿಯುತರನ್ನಾಗಿ ಮಾಡಿ ಒಂದು ಆದೇಶವನ್ನು ಹೊರಡಿಸಬೇಕೆಂದು ನಗರಪಾಲಿಕೆಯ ಆಯುಕ್ತರಲ್ಲಿ ಮನವಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಇಂದೇ ಕಳುಹಿಸಲಾಗುವುದೆಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದರು.

ಮಳೆ ನೀರಿನ ಚರಂಡಿ ಕಂದಾಯ ನಕ್ಷೆಯಂತೆ ಎಲ್ಲಿ ಇದೆಯೋ ಅಲ್ಲಿ ಯಾರೇ ಅಕ್ರಮ ಒತ್ತುವರಿ ಮಾಡಿದ್ದರೂ ತೆರವುಗೊಳಿಸಬೇಕೆಂದು ಐಶ್ವರ್ಯ ಬಡಾವಣೆ ಮತ್ತು ಅರವಿಂದನಗರ ಪ್ರದೇಶದ ಅಕ್ರಮ ಒತ್ತುವರಿದಾರರ ಮೇಲೆ ಕ್ರಮಕೈಗೊಂಡು ತೆರವುಗೊಳಿಸಬೇಕೆಂದು ಆದೇಶಿಸಿದರು. ಈ ಬಗ್ಗೆ  03.07.2019ರಂದು   ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯಲ್ಲಿ ಎಲ್ಲಾ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೆ ನಿರ್ಧರಿಸಲಾಯಿತು.

ವೈನ್ ಶಾಪ್ ಗಳಲ್ಲಿ ಹಾಗೂ ಎಂ.ಆರ್.ಪಿ ಲಿಕ್ಕರ್ ಶಾಪ್‍ಗಳಲ್ಲಿ ಕೇವಲ unsealed bottle ಗಳನ್ನು ಮಾತ್ರ ಮಾರಾಟ ಮಾಡಬೇಕಾಗಿದ್ದರೂ ಸ್ಥಳದಲ್ಲೇ ಒಡೆದು ಮಾರಾಟ ಮಾಡುವ ಮತ್ತು ಸ್ಥಳದಲ್ಲೇ ಕುಡಿದು ಅಕ್ರಮವೆಸಗುತ್ತಿರುವ ಈ ಲಿಕ್ಕರ್ ವೈನ್ ಶಾಪ್‍ಗಳ ಮೇಲೆ ಕ್ರಮಕೈಗೊಳ್ಳಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ನಗರಪಾಲಿಕೆ  ಸದಸ್ಯರಾದ   ಸುನಂದ ಪಾಲನೇತ್ರ , ಮುಖಂಡರಾದ  ಪ್ರಸಾದ್ ಪಚ್ಚು, ನಾರಾಯಣ್ ರಾವ್, ಗೋಪಿನಾಥ್, ರವಿಶಂಕರ್, ಆದಿ, ರೇಣುಕ, ಚಂದ್ರು ಹಾಗೂ ನಗರಪಾಲಿಕೆಯ ಎಲ್ಲಾ ಅಧಿಕಾರಿಗಳು, ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ, ಮುಡಾ, ಪೊಲೀಸ್ ಇಲಾಖೆ, ಸಂಚಾರಿ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು, ವಾರ್ಡ್ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: