ದೇಶಪ್ರಮುಖ ಸುದ್ದಿ

ಜೈಲುಪಾಲಾಗ್ತಾರಾ ಶಶಿಕಲಾ!?

ಚೆನ್ನೈ: ಕಳೆದೆರಡು ದಿನಗಳಲ್ಲಿ ಎಐಎಡಿಎಂಕೆಯಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಪಕ್ಷದ ಅಧ್ಯಕ್ಷರಾಗಿದ್ದ ಮಧುಸೂದನ್ ಅವರನ್ನು ಶಶಿಕಲಾ ಅವರು ಉಚ್ಛಾಟಿಸಿದ್ದಾರೆ. ಪಕ್ಷದ ಸಂವಿಧಾನ ಉಲ್ಲಂಘಿಸಿ ಅಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದ್ದಾರೆ ಎಂದು ಆರೋಪಿಸಿ ಶಶಿಕಲಾ ಅವರನ್ನು ಮಧುಸೂದನ್ ಉಚ್ಛಾಟಿಸಿದ್ದಾರೆ.

ಪನ್ನೀರ್ ಸೆಲ್ವಂಗೆ ಪ್ರೇರಕ ಶಕ್ತಿ ಯಾರು?

ಮುಖ್ಯಮಂತ್ರಿಯಾಗಿದ್ದ ಪನ್ನೀರ್‍ ಸೆಲ್ವಂ ಅವರು ರಾಜೀನಾಮೆ ನೀಡಿ ನಂತರ “ಅಮ್ಮನ ಆತ್ಮ” (ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆತ್ಮ) ತನಗೆ ಪ್ರೇರೇಪಣೆ ಮಾಡಿದೆ ಎಂದು ಹೇಳಿಕೊಂಡು ರಾಜೀನಾಮೆಯನ್ನು ವಾಪಸ್‍ ಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ.

“ಶಶಿಕಲಾ ತನಗೆ ಒತ್ತಡ ಹೇರಿ ರಾಜೀನಾಮೆ ತೆಗೆದುಕೊಂಡಿದ್ದಾರೆ” ಎಂಬುದು ಪನ್ನೀರ್‍ ಸೆಲ್ವಂ ಅವರು ಈಗ ಹೇಳುತ್ತಿರುವ ಮಾತು. ಆದರೆ ಅವರ ರಾಜೀನಾಮೆಯನ್ನು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಈಗಾಗಲೇ ಅಂಗೀಕರಿಸಿದ್ದು, ಪನ್ನೀರ್‍ ಸೆಲ್ವಂ ಈಗ ಹಂಗಾಮಿ ಮುಖ್ಯಮಂತ್ರಿಯಷ್ಟೆ. ಹಂಗಾಮಿ ಮುಖ್ಯಮಂತ್ರಿಯಾದರೂ ಪನ್ನೀರ್‍ ಸೆಲ್ವಂ ಅವರು ಅಧಿಕಾರಿಗಳ ವರ್ಗಾವಣೆಯಂಥ ನಿರ್ಧಾರಗಳನ್ನು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜ್ಯಪಾಲರು ಮೌನ ವಹಿಸಿರುವುದು ಸಮ್ಮತಿ ಲಕ್ಷಣ ಎಂದೇ ಭಾವಿಸುವಂತಾಗಿದೆ.

ಇದೀಗ ಪನ್ನೀರ್ ಸೆಲ್ವಂಗೆ ಈ ಮಟ್ಟಿಗಿನ ಪ್ರೇರಕ ಶಕ್ತಿ ಯಾರು? ಮೌನವಹಿಸಿರುವ ರಾಜ್ಯಪಾಲರಾ? ಅಥವಾ ಅಮ್ಮನ ಆತ್ಮವಾ ಎಂದು ರಾಜಕೀಯ ವಿಶ್ಲೇಷಕರು ಚರ್ಚೆ ಮಾಡುವಂತಾಗಿದೆ.

ಜಯಲಲಿತಾ ಅವರು ಬದುಕಿದ್ದಾಗ ಅವರ ನಿಷ್ಠಾವಂತ ಬಂಟರಾಗಿದ್ದ ಪನ್ನೀರ್ ಸೆಲ್ವಂ, ಜಯಾ ಅವರು ಎರಡು ಬಾರಿ ಕೋರ್ಟ್‍ನಲ್ಲಿ ಶಿಕ್ಷೆಗೀಡಾದಾಗ ಮುಖ್ಯಮಂತ್ರಿ ಹುದ್ದೆಗೆ ನೇಮಿಸಿದ್ದು, ಪನ್ನೀರ್ ಸೆಲ್ವಂ ಅವರನ್ನು.  ಅಮ್ಮ ಬದುಕಿದ್ದಾಗ ಅವರ ಪ್ರೀತಿ ಗಳಿಸಿದ್ದರು ಸೆಲ್ವಂ ಹೀಗಾಗಿ ಅವರೆಡೆಗೆ ತಮಿಳುನಾಡು ಜನರ ಒಲವಿರುವುದು ಸುಳ್ಳಲ್ಲ.

ಶಶಿಕಲಾಗೆ ಕಂಟಕ ?

ಇತ್ತ ಶಶಿಕಲಾ ಅವರು ಅಮ್ಮನಿಗೆ ಸರಿಯಾಗಿ ಆರೈಕೆ ಮಾಡಿಲ್ಲ ಎಂಬ ಗಾಸಿಪ್‍ಗಳು ಹರಿದಾಡುತ್ತಿವೆ. ಮನ್ನಾರ್‍ ಗುಡಿ ಮಾಫಿಯಾ ಎಂಬಲ್ಲಿವರೆಗೆ ಅವರ ಹೆಸರು ಕೇಳಿ ಬಂದಿದ್ದು, ಶಶಿಕಲಾ ಮುಖ್ಯಮಂತ್ರಿಯಾದರೆ ತಮಿಳುನಾಡಿನ ಆಡಳಿತ ಈ ಗ್ಯಾಂಗ್‍ ಕೈಗೆ ಸಿಗಬಹುದು. ಭ್ರಷ್ಟಾಚಾರ ಸ್ವಜನ ಪಕ್ಷಪಾತದ ಆರೋಪಕ್ಕೆ ಒಳಪಟ್ಟು ಜಯಲಲಿತಾ ಅವರಿದ್ದಾಗಲೇ ಎಐಡಿಎಂಕೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದ ಶಶಿಕಲಾ, ಈ ಗ್ಯಾಂಗ್‍ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಹೋಗಬಹುದು ಎಂದು ತಮಿಳುನಾಡಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಅಕ್ರಮ ಆಸ್ತಿ ಪ್ರಕರಣವೂ ಅವರ ಕೊರಳು ಸುತ್ತಿಕೊಂಡಿರುವುದು ಕೂಡ ಅವರಿಗೆ ಪ್ರತಿಕೂಲವಾಗಿ ಪರಿಣಮಿಸಿದೆ. ಒಂದು ವೇಳೆ ಈ ಪ್ರಕರಣಲದಲ್ಲಿ ತೀರ್ಪು ಅವರ ವಿರುದ್ಧ ಬಂದರೆ ಶಶಿಕಲಾ ಸಿಎಂ ಆಗುವುದಿರಲಿ ಜೈಲು ವಾಸದಿಂದ ತಪ್ಪಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.

ಹೈಕೋರ್ಟ್‍ ಮಧ್ಯಪ್ರವೇಶ !

ಶಶಿಕಲಾ ತನ್ನ ಪರವಾಗಿದ್ದಾರೆ ಎಂದು ಹೇಳುತ್ತಿರುವ ಶಾಸಕರನ್ನೆಲ್ಲಾ ಕೊಯಮತ್ತೂರಿನ ಸಮೀಪವಿರುವ ರೆಸಾರ್ಟ್‍ವೊಂದರಲ್ಲಿ ಕೂಡಿಹಾಕಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆ ಶಾಸಕರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ಅರಿಯುವಂತೆ ಮದ್ರಾಸ್‍ ಹೈಕೋರ್ಟ್‍ ಪೊಲೀಸರಿಗೆ ಸೂಚನೆ ನೀಡಿದೆ.

ಇದರಂತೆ ಗೋಲ್ಡನ್‍ ಬೇ ರೆಸಾರ್ಟ್‍ಗೆ ಭೇಟಿ ನೀಡಿರುವ ಪೊಲೀಸರು ಅಲ್ಲಿರುವ ಶಾಸಕರ ಸ್ಥಿತಿಗತಿಯನ್ನು ಕುರಿತು ವಿಚಾರಿಸಿದ್ದಾರೆ. ನಿಮ್ಮನ್ನು ಬಲವಂತವಾಗಿ ಕೂಡಿ ಹಾಕಲಾಗಿದೆಯೇ? ನಿಮ್ಮ ಮೊಬೈಲ್‍ ಫೋನ್‍ಗಳು ನಿಮ್ಮ ಬಳಿ ಇವೆಯೇ? ಅಥವಾ ಅವುಗಳನ್ನು ಕಿತ್ತುಕೊಳ್ಳಲಾಗಿದೆಯೇ ಎಂಬಂಥಹ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಲಾಗಿದೆ.

ಶಶಿಕಲಾ ತಾನು ಮುಖ್ಯಮಂತ್ರಿಯಾಗಲು ಈ ಶಾಸಕರನ್ನು ಬಲವಂತವಾಗಿ ಕೂಡಿ ಹಾಕಿರಬಹುದು ಎಂಬ ಅನುಮಾನವೇ ಮದ್ರಾಸ್ ಹೈಕೋರ್ಟ್ ಇಂತಹ ವಿಚಾರಣೆಗೆ ಆದೇಶ ನೀಡಲು ಕಾರಣ.

ರಾಜ್ಯಪಾಲರ ಜಾಣ ನಡೆ:

ಮುಖ್ಯಮಂತ್ರಿ ರಾಜೀನಾಮೆ ಈಗಾಗಲೇ ಅಂಗೀಕಾರವಾಗಿದ್ದು, ಶಾಸಕಾಂಗ ಪಕ್ಷದ ಮುಖ್ಯಸ್ಥರನ್ನು ಹೊಸ ಮುಖ್ಯಮಂತ್ರಿಯಾಗಿ  ನೇಮಿಸುವುದು ರಾಜ್ಯಪಾಲರ ಜವಾಬ್ದಾರಿ. ಆದರೆ ಪಕ್ಷದಲ್ಲೇ ಎರಡು ಬಣ ಸೃಷ್ಟಿಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ವಿಳಂಬ ತಂತ್ರ ಅನುಸರಿಸುತ್ತಿದ್ದು, ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ.

ಇಷ್ಟು ಮಾತ್ರವಲ್ಲದೆ ಶಶಿಕಲಾ ಮೇಲೆ ಕೋರ್ಟ್‍ ತೀರ್ಪಿನ ತೂಗುಗತ್ತಿ ಇರುವುದು, ಜನರ ಒಲವು ಪನ್ನೀರ್ ಸೆಲ್ವಂ ಪರವಾಗಿರುವುದು ಕೂಡ ರಾಜ್ಯಪಾಲರ ಕಾದುನೋಡುವ ನಡೆಗೆ ಕಾರಣ ಎಂದು ತಿಳಿದುಬಂದಿದೆ.

ಒಟ್ಟಾರೆ ತಮಿಳುನಾಡು ಇಂತಹ ಅಪರೂಪದ ಪರಿಸ್ಥಿತಿಗೆ ಹಿಂದೆಂದೂ ಕಾರಣವಾಗಿರಲಿಲ್ಲ. ಆ ರಾಜ್ಯದ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮುಖ್ಯಮಂತ್ರಿ ಗಾದಿ ಯಾರ ಪಾಲಾಗುತ್ತದೆ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.

Leave a Reply

comments

Related Articles

error: