ಮೈಸೂರು

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ : ಜನತೆಗೆ ಕಾನೂನಿನ ಕುರಿತು ಅರಿವು ಅಗತ್ಯ : ಎಸ್.ಕೆ.ವಂಟಿಗೋಡಿ

ಮೈಸೂರು,ಜೂ.28:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮವನ್ನು ಇಂದಿನಿಂದ ಆಗಸ್ಟ್ 3 ರವರೆಗೆ ಹಮ್ಮಿಕೊಳ್ಳಲಾಗಿದೆ. ನಗರದ ಹಲವೆಡೆ ಕಾನೂನು ಸಾಕ್ಷರತಾ ರಥ ಸಂಚರಿಸಲಿದ್ದು, ಇಂದು ಲಾ ಕೋರ್ಟ್ ಆವರಣದಲ್ಲಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಇಂದಿನಿಂದ 42 ದಿನಗಳ ಕಾಲ ಕಾನೂನು ಅರಿವಿನ ಸಾಕ್ಷರತಾ ಕಾರ್ಯಕ್ರಮ ನಡೆಯಲಿದೆ. ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರು ಕಾರ್ಯುಕ್ರಮವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ, ಮೋಟಾರು ವಾಹನ ಕಾಯ್ದೆ, ಹಿಂದೂ ವಾರಸುದಾರ ಕಾಯ್ದೆ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ ,ಪೋಕ್ಸೋ ಕಾಯ್ದೆ , ಮಾಹಿತಿ ಹಕ್ಕು ಸೇರಿದಂತೆ ನೂರಾರು ಬಗೆಯ ಕಾನೂನು ಕುರಿತು ಅರಿವು ಮೂಡಿಸಲಾಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಬಿಪಿ ದೇವಮಾನೆ  ಮಾತನಾಡಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮುಖ್ಯ. ಹೀಗಾಗಿ ಈ ರೀತಿಯ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದು ಉತ್ತಮ ಪ್ರಜೆಯಾಗಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಆನಂದ್, ವಕೀಲರುಗಳಾದ  ಚಂದ್ರಶೇಖರ್, ಉಮೇಶ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: