ಮೈಸೂರು

ಬಿಎಸ್ ವೈ ತಾವೇ ಗಾಜಿನ ಮನೆಯಲ್ಲಿದ್ದು ಇನ್ನೊಬ್ಬರ ಮನೆಗೆ ಕಲ್ಲೆಸೆಯುವ ಯತ್ನ ನಡೆಸಿದ್ದಾರೆ : ಧ್ರುವನಾರಾಯಣ ವ್ಯಂಗ್ಯ

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಡಿರುವ ಆರೋಪ ಖಂಡನಾರ್ಹ.  ಯಾವುದೇ ಆಧಾರವಿಲ್ಲದೆ ಈ ರೀತಿಯ ಗಂಭೀರ ಆರೋಪ ಮಾಡುವುದು ಸರಿಯಲ್ಲ ಎಂದು ಸಂಸದ ಧ್ರುವನಾರಾಯಣ್ ಕಿಡಿ ಕಾರಿದರು.

ಶನಿವಾರ ಮೈಸೂರಿನ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮೈಸೂರಿಗೆ ಬಂದಾಗಲೆಲ್ಲ ಏನಾದರೊಂದು ಆರೋಪ ಮಾಡುತ್ತಲೆ ಇರುತ್ತಾರೆ. ಕಳೆದ ಬಾರಿ ಇನ್ನು 3 ದಿನಗಳಲ್ಲಿ ಮೂವರು ಸಚಿವರ ತಲೆದಂಡವಾಗುತ್ತದೆ ಎಂದು ಹೇಳಿದ್ದರು. ಆದರೆ, 60 ದಿನಗಳೇ ಕಳೆದರೂ ಯಾರ ತಲೆದಂಡವೂ ಆಗಿಲ್ಲ. ಇನ್ನೊಬ್ಬರ ತೇಜೋವಧೆ ಮಾಡುವ ಸಲುವಾಗಿ ನಿರಾಧಾರವಾಗಿ ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುವುದು ಬಿಎಸ್‍ವೈ ಜಾಯಮಾನ.  ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅನೇಕ ಮಂತ್ರಿಗಳು ಜೈಲಿಗೆ ಹೋಗಿ ಬಂದರು. ಹಲವರ ವಿರುದ್ಧ ಕ್ರಿಮಿನಲ್ ಕೇಸ್ ನಡೆಯುತ್ತಲೇ ಇದೆ. ಹೀಗಿರುವಾಗ ತಾವೇ ಗಾಜಿನ ಮನೆಯಲ್ಲಿದ್ದುಕೊಂಡು ಇನ್ನೊಬ್ಬರ ಮನೆಗೆ ಕಲ್ಲೆಸೆಯುವ ಕೆಲಸಕ್ಕೆ ಮುಂದಾಗಬಾರದು ಎಂದು ವ್ಯಂಗ್ಯವಾಡಿದರು.

ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆಯನ್ನು ಬಜೆಟ್‍ನಲ್ಲೂ ಮುಂದುವರಿಸಿದೆ. ಕಾವೇರಿ, ಮಹದಾಯಿ, ಕಂಬಳ ಸೇರಿದಂತೆ ಅನೇಕ ವಿಷಯಗಳಲ್ಲಿ ತಾರತಮ್ಯ ನೀತಿ ಅನುಸರಿಸಿದ ಕೇಂದ್ರ ಇದೀಗ ಬಜೆಟ್‍ನಲ್ಲಿ ಅನುದಾನ ನೀಡಿಕೆಯಲ್ಲೂ ತಾರತಮ್ಯ ಮಾಡಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಹುಲಿಗಳಿರುವುದು ರಾಜ್ಯದ ಬಂಡೀಪುರದಲ್ಲಿ. ಆದರೆ ಮಧ್ಯಪ್ರದೇಶದಲ್ಲಿ ಕೇವಲ 8ಹುಲಿಗಳಿದ್ದು ಅಲ್ಲಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. 150 ಹುಲಿಗಳಿರುವ ಬಂಡೀಪುರ ರಕ್ಷಿತಾರಣ್ಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಶೂನ್ಯವೇಳೆಯಲ್ಲಿ ಪ್ರಸ್ತಾಪ: ಸಂಸತ್ ಕಲಾಪದ ಶೂನ್ಯ ವೇಳೆಯಲ್ಲಿ ಬರಪರಿಹಾರದ ಕುರಿತು ಪ್ರಸ್ತಾಪ ಮಾಡಿದ್ದೆ. ಅದರ ಪರಿಣಾಮವಾಗಿ 450ಕೋಟಿ ರೂ.ಬರಪರಿಹಾರ ನೀಡಿದ್ದಾರೆ. ರಾಜ್ಯದಿಂದ ಹೆಚ್ಚು ಬಿಜೆಪಿ ಸಂಸದರಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೇಂದ್ರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಾರ್ವಜನಿಕರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಮೂರ್ಖರನ್ನಾಗಿಸಲು ಸಮಯ ವ್ಯರ್ಥ ಮಾಡುವ ಬದಲು ಜನರ ಹಿತಾಸಕ್ತಿ ಕಾಯುವ ಕೆಲಸ ಮಾಡಿದ್ದರೆ ಬರ ಪರಸ್ಥಿತಿ ನಿವಾರಿಸಬಹುದಿತ್ತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೈಲಾಕ್ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ, ಮಾಜಿ ಸದಸ್ಯ ಮಾರುತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: