ಕರ್ನಾಟಕಪ್ರಮುಖ ಸುದ್ದಿ

ಬ್ರೇಕು ಗೀಕೂ ಏನು ಇಲ್ಲ; ಬ್ರಿಗೇಡ್‍ಗೆ ಪಕ್ಷದ ವರಿಷ್ಠರ ಬೆಂಬಲವಿದೆ: ಈಶ್ವರಪ್ಪ

ಬೆಂಗಳೂರು: ಮಾಜಿ ಡಿಸಿಎಂ ಕೆಎಸ್‍ ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್ ಸಂಘಟನೆಯ ಚಟುವಟಿಕೆ ಮತ್ತೆ ಗರಿಗೆದರಿದೆ. ಬೆಂಗಳೂರಿನಲ್ಲಿರುವ ಶಾಸಕರ ಭವನದಲ್ಲಿ ಇಂದು ಈಶ್ವರಪ್ಪ ಅವರ ನೇತೃತ್ವದಲ್ಲೇ ಮತ್ತೆ ಬ್ರಿಗೇಡ್‍ನ ಸಭೆ ನಡೆಸಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ, ಕೆಲವರು ರಾಯಣ್ಣ ಸಂಘಟನೆಗೆ ಬ್ರೇಕ್ ಹಾಕಲಾಗಿದೆ ಎನ್ನುತ್ತಾರೆ. ಆದರೆ ಬ್ರೇಕು ಗೀಕು ಏನೂ ಇಲ್ಲ. ಪಕ್ಷವೂ ಕೂಡ ಸಂಘಟನೆಗೆ ಬ್ರೇಕ್ ಹಾಕುವಂತೆ ನನಗೆ ತಿಳಿಸಿಲ್ಲ. ಹೀಗಿದ್ದಾಗ್ಯೂ ಇಂತಹ ಮಾತನಾಡುವುದು ಸರಿಯಲ್ಲ ಎಂದರು.

“ರಾಯಣ್ಣ ಬ್ರಿಗೇಡ್ ಒಂದು ರಾಜಕೀಯೇತರ ಸಂಘಟನೆ. ಬಿಜೆಪಿಗೂ ರಾಯಣ್ಣ ಬ್ರಿಗೇಡ್‍ಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳುವ ಮೂಲಕ ಈಶ್ವರಪ್ಪ ಅಚ್ಚರಿ ಮೂಡಿಸಿದರು. “ಪಕ್ಷದ ವರಿಷ್ಠ ಅಮಿತ್‍ ಷಾ ಅವರು ರಾಯಣ್ಣ ಸಂಘಟನೆ ಬಗ್ಗೆ ಏನೂ ತಕರಾರು ಮಾಡಿಲ್ಲ. ಬ್ರಿಗೇಡ್‍ ಸಂಘಟನೆಗೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದ ಈಶ್ವರಪ್ಪ ಅವರು, ಪಕ್ಷದ ಹೈಕಮಾಂಡ್‍ನಲ್ಲಿ ತಮಗೂ ಬೆಂಬಲವಿದೆ ಎಂಬ ಸಂದೇಶ ರವಾನಿಸಿದರು.

ಇದರೊಂದಿಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯ ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ಕಂಡುಬಂದಿದ್ದು, ತಮ್ಮ ಪ್ರಶ್ನಾತೀತ ನಾಯಕತ್ವಕ್ಕೆ ಸವಾಲಾಗಿರುವ ಈಶ್ವರಪ್ಪ ಅವರನ್ನು ಯಡಿಯೂರಪ್ಪ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Leave a Reply

comments

Related Articles

error: