ಪ್ರಮುಖ ಸುದ್ದಿ

ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಿಡ್ನಿಯ ಮಲೆಯಾಳಿ ಸಂಘದಿಂದ ಆರ್ಥಿಕ ನೆರವು

ರಾಜ್ಯ(ಮಡಿಕೇರಿ) ಜೂ.29: – ಕಳೆದ ಸಾಲಿನ ಪ್ರಾಕೃತಿಕ ವಿಕೋಪದ ಸಂದರ್ಭ ಸಂತ್ರಸ್ತರಾದ ಕಾಲೂರು ಗ್ರಾಮದ ಸುಮಾರು 20 ವಿದ್ಯಾರ್ಥಿಗಳಿಗೆ ಸಿಡ್ನಿಯ ಮಲೆಯಾಳಿ ಸಂಘದ ವತಿಯಿಂದ ತಲಾ 3 ಸಾವಿರ ರೂ.ಗಳಂತೆ 60ಸಾವಿರ ರೂ.ಗಳ ಆರ್ಥಿಕ ನೆರವನ್ನು ವಿತರಿಸಲಾಯಿತು.
ಮೂಲತಃ ಕೊಡಗಿನವರಾಗಿದ್ದು, ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿರುವ ಐಮಂಡ ಜಗದೀಶ್ ಅವರು ನಗರದ ಪತ್ರಿಕಾಭವನದಲ್ಲಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವಿನ ಚೆಕ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಜಗದೀಶ್ ಅವರು, ಕಳೆದ ಸಾಲಿನ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದ ಹಲವು ಕುಟುಂಬಗಳಿಗೆ ತಾನು ವೈಯಕ್ತಿಕವಾಗಿ ಸುಮಾರು 2 ಲಕ್ಷ ರೂ.ಗಳ ನೆರವನ್ನು ನೀಡಿದ್ದು, ಇದೀಗ ಸಿಡ್ನಿಯ ಕೊಡವ ಕೂಟ ಹಾಗೂ ಮಲೆಯಾಳಿ ಸಂಘಗಳು ನೀಡಿರುವ ನೆರವನ್ನು ವಿತರಿಸುತ್ತಿರುವುದಾಗಿ ತಿಳಿಸಿದರು.
ಸಿಡ್ನಿಯ ಕೊಡವ ಕೂಟದ ವತಿಯಿಂದ ಮಕ್ಕಂದೂರು ಸರಕಾರಿ ಪ್ರೌಢಶಾಲೆಯ 53 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸ್ವೆಟರ್, ಟೈ ಮತ್ತು ಪಾದರಕ್ಷೆಗಳನ್ನು ಗುರುವಾರ ವಿತರಿಸಲಾಗಿದ್ದು, ಇದೀಗ ಸಿಡ್ನಿಯ ಮಲೆಯಾಳಿ ಸಂಘದವರು ಸಂಗ್ರಹಿಸಿ ನೀಡಿರುವ 60 ಸಾವಿರ ರೂ.ಗಳನ್ನು ಕಾಲೂರು ಗ್ರಾಮದ ಸಂತ್ರಸ್ತ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ತಲಾ 3 ಸಾವಿರ ರೂ.ಗಳಂತೆ ವಿತರಿಸುತ್ತಿರುವುದಾಗಿ ಹೇಳಿದರು.
ಈ ಅಲ್ಪ ನೆರವಿನಿಂದ ಸಂತ್ರಸ್ತರ ಎಲ್ಲಾ ಸಂಕಷ್ಟಗಳು ಪರಿಹಾರವಾಗುವುದಿಲ್ಲ. ಆದರೆ ವಿದೇಶದಲ್ಲಿದ್ದರೂ, ನಿಮ್ಮ ನೋವಿಗೆ ನಾವು ಸ್ಪಂದಿಸುತ್ತೇವೆ ಎಂಬ ಭರವಸೆಯನ್ನು ಸಂತ್ರಸ್ತ ಕುಟುಂಬಗಳಲ್ಲಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಳೆದ ಆರು ತಿಂಗಳ ಹಿಂದೆ ತಾನು ಕೊಡಗಿಗೆ ಆಗಮಿಸಿದ ಸಂದರ್ಭ ವೈಯಕ್ತಿಕವಾಗಿ ಕೆಲವು ಸಂತ್ರಸ್ತ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಿದ್ದು, ಬಳಿಕ ಸಿಡ್ನಿಯಲ್ಲಿರುವ ಕೊಡವ ಕೂಟ ಹಾಗೂ ಮಲೆಯಾಳಿ ಸಂಘದವರು ಕೂಡಾ ಆಯಾ ಸಂಘಟನೆಗಳ ಸದಸ್ಯರಿಂದ ಹಣವನ್ನು ಸಂಗ್ರಹಿಸಿ ನೀಡಿದ್ದರು. ಇದು ನೈಜ ಸಂತ್ರಸ್ತರಿಗೆ ತಲುಪಬೇಕು ಎಂಬ ಉದ್ದೇಶದಿಂದ ಪತ್ರಕರ್ತ ಐಮಂಡ ಗೋಪಾಲ್ ಹಾಗೂ ಕಾಲೂರಿನ ಸಮಾಜಸೇವಕ ನಾಗೇಶ್ ಕಾಲೂರು ಅವರ ಮೂಲಕ ಕಾರ್ಯಕ್ರಮ ರೂಪಿಸಿ ನೆರವು ಹಸ್ತಾಂತರಿಸುತ್ತಿರುವುದಾಗಿ ಹೇಳಿದರು.
ಸಾಹಿತಿ ಹಾಗೂ ಕಾಲೂರಿನ ಸಮಾಜಸೇವಕ ನಾಗೇಶ್ ಕಾಲೂರು ಅವರು ಮಾತನಾಡಿದ ದೇಶ ವಿದೇಶಗಳ ದಾನಿಗಳ ನೆರವಿನಿಂದ ಇಂದು ಕಾಲೂರಿನ ಸಂತ್ರಸ್ತ ಕುಟುಂಬಗಳು ಒಂದಷ್ಟು ನೆಮ್ಮದಿಯನ್ನು ಕಾಣುವಂತಾಗಿದೆ. ಪರರಿಗಾಗಿ ಸ್ಪಂದಿಸುವ ಗುಣ ಐಮಂಡ ಜಗದೀಶ್ ಅವರಲ್ಲಿರುವುದನ್ನು ಅವರ ‘ಬೆಳಕಿನ ಕಿರಣ’ ಕೃತಿಯಲ್ಲಿ ನಾನು ಗಮನಿಸಿದ್ದೆ. ಅದರಂತೆ ಅವರು ಇಂದು ಸಂತ್ರಸ್ತರಿಗಾಗಿ ಮಿಡಿದಿದ್ದು, ನೆರವು ನೀಡಿದ ಕೊಡವ ಕೂಟ ಹಾಗೂ ಮಲೆಯಾಳಿ ಸಂಘದವರಿಗೆ ಸಂತ್ರಸ್ತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭ ಪತ್ರಕರ್ತ ಐಮಂಡ ಗೋಪಾಲ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: