
ಪ್ರಮುಖ ಸುದ್ದಿ
ಭಾರೀ ಮಳೆಯಿಂದ ಗೋಡೆ ಕುಸಿತ : 15ಮಂದಿ ಸಾವು
ದೇಶ(ಮಹಾರಾಷ್ಟ್ರ)ಜೂ.29:- ಪುಣೆಯ ಕೊಂಧ್ವಾ ಪ್ರದೇಶದಲ್ಲಿರುವ ತಲಾಬ್ ಮಸೀದಿ ಬಳಿ ವಾಹನಗಳನ್ನು ನಿಲ್ಲಿಸಿದ್ದ ಪಾರ್ಕಿಂಗ್ ಸ್ಥಳದ ಗೋಡೆ ಕುಸಿದ ಪರಿಣಾಮ 15 ಮಂದಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ತಡರಾತ್ರಿ ನಡೆದಿದೆ. ಕಾರ್ಮಿಕರು ವಾಸವಿದ್ದ ಶೆಡ್ ಮೇಲೆ ಗೋಡೆ ಕುಸಿದು ಈ ಅವಘಡ ಸಂಭವಿಸಿದೆ.
ಪ್ರಾರಂಭದಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎನ್ನುವ ಕುರಿತು ವರದಿಯಾಗಿತ್ತು. ಬಳಿಕ ಸಾವಿನ ಸಂಖ್ಯೆ 15ಕ್ಕೆ ಏರಿದೆ ಎನ್ನಲಾಗಿದೆ. ಅಲ್ಲದೇ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಎರಡಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮೂರರಿಂದ ನಾಲ್ಕು ಮಂದಿ ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಮೃತರಲ್ಲಿ 10 ಪುರುಷರು, ಓರ್ವ ಮಹಿಳೆ ಹಾಗೂ ನಾಲ್ಕು ಮಕ್ಕಳು ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮೃತರ ಗುರುತು ಲಭ್ಯವಾಗಿಲ್ಲ.
ಘಟನಾ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಮಳೆಯಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಮುಂಬೈ ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, 24ಗಂಟೆಗಳ ಎಚ್ಚರಿಕೆ ನೀಡಲಾಗಿದೆ. (ಎಸ್.ಎಚ್)