
ಕರ್ನಾಟಕಪ್ರಮುಖ ಸುದ್ದಿ
ದುರ್ಜನರು, ಧರ್ಮ ವಿರೋಧಿಗಳ ಹತ್ಯೆಗೆ 2011ರಲ್ಲೇ ಬ್ಲೂ ಪ್ರಿಂಟ್ ತಯಾರು: ಅಮೋಲ್ ಕಾಳೆ
ಬೆಂಗಳೂರು,ಜೂ.29-ವಿಚಾರವಾದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ತನಿಖಾಧಿಕಾರಿಗಳ ಬಳಿ ಆರೋಪಿ ಅಮೋಲ್ ಕಾಳೆ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾನೆ.
ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್ ಮತ್ತು ಎಂ.ಎಂ.ಕಲಬುರಗಿ ಹತ್ಯೆಯ ಪ್ರಮುಖ ಆರೋಪಿ ಅಮೋಲ್ ಕಾಳೆ ದುರ್ಜನರು ಹಾಗೂ ಧರ್ಮ ವಿರೋಧಿಗಳನ್ನು ಹತ್ಯೆ ಮಾಡಲು 2011ರಲ್ಲೇ ಬ್ಲೂ ಪ್ರಿಂಟ್ ತಯಾರಿಸಲಾಗಿತ್ತು ಎಂದು ಬಾಯ್ಬಿಟ್ಟಿದ್ದಾನೆ.
ಶಶಿಕಾಂತ್ ಅಲಿಯಾಸ್ ಕಾಕ ಅವರನ್ನು ನಾನು ಗೋವಾದಲ್ಲಿ ದಾದಾ ಜೊತೆ ಭೇಟಿ ಮಾಡಿದ್ದೆ. ಈ ವೇಳೆ ಅವರು ನಾವು ಹಿಂದೂ ಸಮಾಜವನ್ನು ರಕ್ಷಿಸಬೇಕು. ಕಾನೂನು ಮೂಲಕ ಇಂತವುಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಹೀಗಾಗಿ ದುರ್ಜನರು ಮತ್ತು ಧರ್ಮ ವಿರೋಧಿಗಳನ್ನು ಸಮಾಜದಿಂದ ತೆಗೆದು ಹಾಕಬೇಕು ಎಂದು ಹೇಳಿದ್ದರು.
ಧಾರ್ಮಿಕ ಶತ್ರುಗಳನ್ನು ಹತ್ಯೆ ಮಾಡುವ ಯೋಜನೆಗೆ ಕೃತಿ ಧರ್ಮಕಾರ್ಯ ಎಂಬ ಹೆಸರಿನಲ್ಲಿ ಕರೆಯುತ್ತಿದ್ದೆವು. ತಮ್ಮ ಕಾರ್ಯಕ್ಕೆ ಯುವಕರನ್ನು ಹುರಿದುಂಬಿಸಲಾಗಿತ್ತು. ಈ ವೇಳೆ ಯಾವುದೇ ತಪ್ಪಾಗದಂತೆ ದಾದಾ ನಮಗೆ ಸೂಚಿಸಿದ್ದರು. ನಮ್ಮನ್ನು ನಾವು ಜನಪ್ರಿಯಗೊಳಿಸಿಕೊಳ್ಳದಂತೆ ಹಾಗೂ ಸಾಮಾಜಿಕ ಮಾಧ್ಯಮ, ಫೋನ್ ನಂಬರ್, ಇಂಟರ್ ನೆಟ್ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳದಂತೆ ಸೂಚಿಸಿದ್ದರು.
ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ವಾಗ್ಮೋರೆಗೆ ತರಬೇತಿ ನೀಡಲಾಗಿತ್ತು. ಆತನೇ ಗೌರಿ ಲಂಕೇಶ್ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದು ಎಂದು ಹೇಳಿದ್ದಾನೆ. (ಎಂ.ಎನ್)