ಮೈಸೂರು

ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿ ಅಭಿವೃದ್ಧಿಪಡಿಸುವ ಕುರಿತು ಸಮಿತಿ ರಚಿಸಿ : ಶಾಸಕ ಎಚ್.ವಿಶ್ವನಾಥ್ ಸೂಚನೆ

ಮೈಸೂರು,ಜೂ.29:- ಹುಣಸೂರು ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ನೆಲಸಮಗೊಳಿಸುವ  ಅಥವಾ ಅಭಿವೃದ್ಧಿಪಡಿಸುವ ಕುರಿತು ತಾಲೂಕು ಪಂಚಾಯತ್  ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಎಂದು ಶಾಸಕ ಎಚ್.ವಿಶ್ವನಾಥ್ ಸೂಚಿಸಿದರು.

ಹುಣಸೂರು ಪಟ್ಟಣದ ತಾಲೂಕು ಪಂಚಾಯತ್  ಸಭಾಂಗಣದಲ್ಲಿ ನಿನ್ನೆ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಣ ಇಲಾಖೆ ತಾಲೂಕಿನಲ್ಲಿ ವಿವಿಧ ಸರ್ಕಾರಿ ಶಾಲೆಗಳ 55ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ ಎಂದು ತಿಳಿಸಿದೆ. ಅಪಾಯದ ಸ್ಥಿತಿಯಲ್ಲಿರುವ ಕೊಠಡಿಗಳನ್ನು ನೆಲಸಮಗೊಳಿಸುವ ಅಥವಾ ಸಾಧ್ಯವಾದರೆ ಅಭಿವೃದ್ಧಿಪಡಿಸುವ ಕುರಿತು ಇಒ ನೇತೃತ್ವದಲ್ಲಿ ಬಿಇಒ, ಲೋಕೋಪಯೋಗಿ ಇಲಾಖೆಯ ಎಇಇ, ಆರ್‌ಎಫ್‌ಒ, ತಾಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ ಅವರನ್ನು ಒಳಗೊಂಡ ಸಮಿತಿ ರಚಿಸಿ ಪರಿಶೀಲನೆ ನಡೆಸಿ ತಿಂಗಳೊಳಗೆ ವರದಿ ಸಲ್ಲಿಸಿ ಎಂದು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ 140ಕ್ಕೂ ಹೆಚ್ಚು ಶಾಲೆಗಳ ಕಟ್ಟಡಗಳ ದುರಸ್ಥಿ ಕಾರ್ಯ ನಡೆಯಬೇಕಿದೆ. ಈ ಸಾಲಿಗಾಗಿ ಶೇ.90ರಷ್ಟು ಪಠ್ಯಪುಸ್ತಕಗಳ ವಿತರಣೆ ಪೂರ್ಣಗೊಂಡಿದೆ. ಸಮವಸ್ತ್ರ, ಶೂಗಳು, ಹಾಗೂ ಬೈಸಿಕಲ್ ಇನ್ನೂ ವಿತರಣೆಯಾಗಿಲ್ಲ ಎಂದರು.

ಇದೇ ವೇಳೆ  ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ ತಪ್ಪಿಲ್ಲ. ವೈದ್ಯರ ನಿರ್ಲಕ್ಷ್ಯ ಹೆಚ್ಚುತ್ತಿದೆ. ಸಣ್ಣಪುಟ್ಟ ಕಾಯಿಲೆಗಳಿಗೂ ಮೈಸೂರಿಗೆ ಕಳುಹಿಸುತ್ತಿದ್ದಾರೆ ಎಂದು ಜಿ.ಪಂ.ಸದಸ್ಯರಾದ ಕಟ್ಟನಾಯ್ಕ, ಸುರೇಂದ್ರ ಆರೋಪಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಇದಕ್ಕೆ ಪ್ರತಿಕ್ರಿಯಿಸಿ ಆದಷ್ಟು ಶೀಘ್ರ ಆರೋಗ್ಯ ರಕ್ಷಾಸಮಿತಿ ಸಭೆ ಕರೆದು ಸಮಸ್ಯೆಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಗೌರಮ್ಮಸೋಮಶೇಖರ್, ಸದಸ್ಯರಾದ ಎಂ.ಬಿ.ಸುರೇಂದ್ರ, ಸಾವಿತ್ರಮ್ಮ, ತಾ.ಪಂ.ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ ತಹಸೀಲ್ದಾರ್ ಐ.ಇ.ಬಸವರಾಜು, ಇಒ ಸಿ. ಆರ್.ಕೃಷ್ಣಕುಮಾರ್, ಜಿ.ಪಂ.ಎಇಇ ರಮೇಶ್ ಹಾಗೂ ಅಧಿಕಾರಿಗಳು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: