ದೇಶ

ಎಎನ್ 32 ವಿಮಾನ ಪತನ ಸ್ಥಳಕ್ಕೆ ತೆರಳಿದ್ದ ರಕ್ಷಣಾ ತಂಡವೇ ಅಪಾಯಕ್ಕೆ

ನವದೆಹಲಿ,ಜೂ.29-ಭಾರತೀಯ ವಾಯುಪಡೆಯ ಎಎನ್ 32 ವಿಮಾನ ದುರಂತದಲ್ಲಿ ಹುತಾತ್ಮರಾದ 13 ಯೋಧರ ಶವಗಳನ್ನು ಪತ್ತೆಹಚ್ಚಿ ರವಾನಿಸಿದ್ದ ರಕ್ಷಣಾ ತಂಡವೇ ಇದೀಗ ಪರ್ವತ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿದೆ.

ರಷ್ಯಾ ನಿರ್ಮಿತ ಎಎನ್ 32 ವಿಮಾನ ಜೂ. 3 ರಂದು ಅಸ್ಸಾಂನ ಜೋಹಾರ್ಟ್ ವಾಯು ನೆಲೆಯಿಂದ ಟೇಕಾಫ್ ಆದ ಅರ್ಧ ತಾಸೊಳಗೆ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ವಿಮಾನದ ಅವಶೇಷಗಳು ಜೂ.11 ರಂದು ಅರುಣಾಚಲ ಪ್ರದೇಶದ ಲಿಪೋದ ಉತ್ತರ ಭಾಗಕ್ಕೆ 16 ಕಿ.ಮೀ. ದೂರದ ಸುಮಾರು 12,000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿತ್ತು.

ವಿಮಾನದ ಅವಶೇಷಗಳು ಪತ್ತೆಯಾದ ಸ್ಥಳಕ್ಕೆ ವಾಯುಸೇನೆಯ 12 ಮಂದಿ ರಕ್ಷಣಾ ತಂಡವನ್ನು ಶೋಧ ಕಾರ್ಯ ನಡೆಸಲು ಜೂ.12ರಂದು ಏರ್ ಡ್ರಾಪ್(ವಿಮಾನದಿಂದ ಕೆಳಕ್ಕಿಳಿಸಿದ್ದು) ಮಾಡಲಾಗಿತ್ತು. ಅಲ್ಲದೇ ಅವರಿಗೆ ಬೇಕಾಗುವಷ್ಟು ರೇಷನ್ ಅನ್ನು ನೀಡಲಾಗಿತ್ತು.

ಶೋಧ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡ ವಿಮಾನದಲ್ಲಿದ್ದ 13 ಮಂದಿ ಯೋಧರು ಹುತಾತ್ಮರಾಗಿರುವುದನ್ನು ಖಚಿತಪಡಿಸಿತ್ತು. ರಕ್ಷಣಾ ತಂಡ ತಿಳಿಸಿದ ಮಾಹಿತಿ ಮೇರೆಗೆ ಭಾರತೀಯ ವಾಯುಸೇನೆ (ಐಎಎಫ್) ವಿಮಾನದಲ್ಲಿದ್ದ 13 ಮಂದಿ ಮೃತಪಟ್ಟಿದ್ದಾರೆ ಎಂದು ಟ್ವಿಟ್ ಮಾಡಿತ್ತು. ಅದಾದ ಬಳಿಕ ಮೃತದೇಹಗಳನ್ನು ಹೊರತರಲು ರಕ್ಷಣಾ ತಂಡ ಸಾಕಷ್ಟು ಶ್ರಮವಹಿಸಿತ್ತು. ಕೊನೆಗೆ ಐಎಎಫ್ ಟ್ವಿಟ್ ಮಾಡಿದ ಏಳು ದಿನಗಳ ಬಳಿಕ ಅಂದರೆ ಜೂ. 20 ರಂದು ಮೃತದೇಹಗಳನ್ನು ಘಟನಾ ಸ್ಥಳದಿಂದ ಹೊರತೆಗೆಯಲಾಗಿತ್ತು.

ಆದರೆ ಇದೀಗ ಕಳೆದ 17ದಿನಗಳಿಂದ ಬರೋಬ್ಬರಿ 12 ಸಾವಿರ ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ 12 ಮಂದಿ ರಕ್ಷಣಾ ತಂಡ ಸಿಲುಕಿಕೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ಆ ಪ್ರದೇಶದಲ್ಲಿ ಏರ್ ಲಿಫ್ಟ್ ಮಾಡುವುದು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು, ಶೀಘ್ರವೇ ಅವರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ರಕ್ಷಣಾ ಪಿಆರ್ ಒ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಮಾಹಿತಿ ನೀಡಿದ್ದಾರೆ.

ರಕ್ಷಣಾ ತಂಡದಲ್ಲಿ ಐಎಎಫ್ ನ ಒಂಬತ್ತು ಮಂದಿ, ಪರ್ವತಾರೋಹಿ ಟಾಕಾ ಟಾಮ್ಟು ಮತ್ತು ಆತನ ಇಬ್ಬರು ಸಹಾಯಕರು ಸೇರಿ 12 ಜನರ ತಂಡವಿದೆ. ಒಂದು ವೇಳೆ ಆ ಪ್ರದೇಶದಲ್ಲಿ ಏರ್ ಲಿಫ್ಟ್ ಮಾಡುವುದು ಕಷ್ಟವಾದರೆ ಕಾಲ್ನಡಿಗೆಯ ಹಾದಿಯಲ್ಲಿ ಬರಲು ನೆರವು ನೀಡಲು ಸಿದ್ದರಾಗಿದ್ದೇವೆ ಎಂದು ಶಿಯೋಮಿ ಜಿಲ್ಲಾಡಳಿತ ತಿಳಿಸಿದೆ. (ಎಂ.ಎನ್)

 

Leave a Reply

comments

Related Articles

error: