ಮೈಸೂರು

ನಿಜವಾದ ಸಾಹಿತ್ಯ ವ್ಯಕ್ತಿತ್ವ, ಶೀಲ ಚಾರಿತ್ರವನ್ನು ಸೃಷ್ಟಿಸಬೇಕು : ಡಾ. ನಂದೀಶ್ ಹಂಚೆ

ಮೈಸೂರು,ಜೂ.29:- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಇಂದು ‘ಸಾಹಿತ್ಯ ಮತ್ತು ಸೃಜನಶೀಲತೆ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ನಂದೀಶ್ ಹಂಚೆ ಮಾತನಾಡಿ  ಜಗತ್ತಿನಲ್ಲಿರುವುದು 18 ಶಾಸ್ತ್ರಗಳಾದರೂ, ಜಗತ್ತು ಬದಲಾದಂತೆ ಹೊಸ ಹೊಸದನ್ನು ಸೃಜಿಸುವುದು ಕವಿಯ ಧರ್ಮ. ‘ಕುವೆಂಪುವನ್ನು ರಾಮಾಯಣ ಸೃಷ್ಟಿಸಿತು. ರಾಮಾಯಣವನ್ನು ಕುವೆಂಪು ಸೃಷ್ಟಿಸಲಿಲ್ಲ’ ಎಂಬ ಮಾತಿದೆ.  ಅಂದರೆ ಕವಿಯಾದವನು ಒಂದು ಅಪೂರ್ವವಾದನ್ನು ನಿರ್ಮಾಣ ಮಾಡುತ್ತಾನೆ.  ನಿಜವಾದ ಸಾಹಿತ್ಯ ವ್ಯಕ್ತಿತ್ವ, ಶೀಲ, ಚಾರಿತ್ರವನ್ನು ಸೃಷ್ಟಿಸಬೇಕು ಅದು ಯಾವಾಗಲೂ ಹೊಸ ಮಾದರಿಯನ್ನು ಹುಟ್ಟು ಹಾಕುತ್ತದೆ. ಸಾಹಿತ್ಯ ಹೊಸ ಮಾನವ ಚರಿತ್ರೆಗಳನ್ನು ರೂಪಿಸಿದೆಯೇ ಹೊರತು ಹೊಸ ನಗರಗಳನ್ನಲ್ಲ.  ವಿದ್ಯಾರ್ಥಿಗಳು ಕಾವ್ಯವನ್ನು ಅನುಸಂಧಾನ ಮಾಡಿಕೊಳ್ಳುವುದನ್ನು ಕಲಿಯಬೇಕಾಗಿದೆ.  ವಾಲ್ಮೀಕಿಗೆ ಸಾಧ್ಯವಾಗದ ಪೂರ್ಣದೃಷ್ಟಿಯನ್ನು ಕುವೆಂಪು ಅವರು ‘ಶ್ರೀ ರಾಮಾಯಣ ದರ್ಶನಂ’ ಮೂಲಕ ಸೃಜಿಸಿದರು. ಮಾನವತ್ವದ ಗುಣವನ್ನು ಕವಿ ಮತ್ತೆ ಮತ್ತೆ ಪುನರ್ ಸೃಷ್ಟಿಸುತ್ತಾನೆ. ಶ್ರೀ ರಾಮಾಯಣ ದರ್ಶನಂನ ರಾಮ, ಮಂಥರೆ, ಹನುಮಂತ, ರಾವಣ ಮೊದಲಾದ ಪಾತ್ರಗಳ ಮೂಲಕ ವ್ಯಕ್ತಿಯೊಳಗಿರುವ ಭಾವ ಶೋಧವಾಗುತ್ತದೆ. ತಮ್ಮ ಶೀಲ ಮತ್ತು ಚಾರಿತ್ರವನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಕಾಪಾಡಿಕೊಳ್ಳಬೇಕು ಎಂಬುದನ್ನು ರಾಮ ಸೀತೆಯೊಡನೆ ಮೊದಲು ಅಗ್ನಿಪ್ರವೇಶ ಮಾಡುವುದರ ಮೂಲಕ ಧ್ವನಿಸುತ್ತಾರೆ. ತನ್ನೆದುರು ಕಾಣುವ ವಸ್ತುವನ್ನು ಹೇಗೆ ನೋಡಬೇಕು ಎಂಬುದನ್ನು ಪಂಪನ ಪಂಪ ಭಾರತದ ಕೆಲ ಸನ್ನಿವೇಶದ ನಿದರ್ಶನದ ಮೂಲಕ ಪಂಪ ಅಭಿವ್ಯಕ್ತಿಸುತ್ತಾನೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ವೆಂಕಟರಾಮು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ,   ಜಯಕುಮಾರಿ ಬಿ.ಆರ್., ಹಾಗೂ ಡಾ. ವಿನೋದಮ್ಮ   ಉಪಸ್ಥಿತರಿದ್ದರು.

ಕಿರಣ್‍ಕುಮಾರ್   ಸ್ವಾಗತಿಸಿದರು. ಭಾರತಿ ಪ್ರಾರ್ಥಿಸಿದರು,   ನಾಗೇಶ್ ಎಂ ವಂದಿಸಿದರು.  (ಎಸ್.ಎಚ್)

Leave a Reply

comments

Related Articles

error: