ಪ್ರಮುಖ ಸುದ್ದಿ

ಕುಂಡಾಮೇಸ್ತ್ರಿ ಕುಡಿಯುವ ನೀರಿನ ಯೋಜನೆ : ಚೆಕ್ ಡ್ಯಾಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ : ಎಂಎಲ್‍ಸಿ ಸುನೀಲ್ ಸುಬ್ರಮಣಿ ಸೂಚನೆ

ರಾಜ್ಯ(ಮಡಿಕೇರಿ )ಜು.2 :- ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಕುಂಡಾಮೇಸ್ತ್ರಿ ಯೋಜನೆಯ ಚೆಕ್ ಡ್ಯಾಂ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಪರಿಶೀಲಿಸಿದರು.

ಮಡಿಕೇರಿ ತಾಲೂಕಿನ ಕುಂಡಾಮೇಸ್ತ್ರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ವೀಕ್ಷಣೆ ಮಾಡಿದ ವಿಧಾನ ಪರಿಷತ್ ಸದಸ್ಯರು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಸೂಚಿಸಿದರು.

ಈಗಾಗಲೇ ಮಡಿಕೇರಿ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕುಂಡಾಮೇಸ್ತ್ರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಚೆಕ್‍ಡ್ಯಾಂ ಕಾಮಗಾರಿ ಪ್ರಗತಿಯಲ್ಲಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಎಂಜಿನಿಯರ್‍ಗೆ ನಿರ್ದೇಶನ ನೀಡಿದರು.

ಕುಂಡಾಮೇಸ್ತ್ರಿ ಯೋಜನೆಯನ್ನು ಬಹಳ ನಿರೀಕ್ಷೆಯಿಟ್ಟು ಅನುಷ್ಠಾನಗೊಳಿಸಲಾಗುತ್ತಿದೆ. ಮಡಿಕೇರಿ ನಗರಕ್ಕೆ ಕುಡಿಯುವ ನೀರು ಹಾಹಾಕಾರ ನೀಗಿಸಲು ಪ್ರಯತ್ನಿಸಲಾಗಿದೆ ಎಂದರು.

ಕುಂಡಾಮೇಸ್ತ್ರಿ ಯೋಜನೆಯಿಂದ ವರ್ಷ ಪೂರ್ತಿ ಕುಡಿಯುವ ನೀರು ದೊರೆಯುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಶಾಸಕರು ಹೇಳಿದರು.

ಈಗಾಗಲೇ ಚೆಕ್‍ಡ್ಯಾಂ ನಿರ್ಮಾಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಪ್ರಥಮ ಆದ್ಯತೆ ಮತ್ತು ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.

ಕುಂಡಾಮೇಸ್ತ್ರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು, ಶಾಸಕರು ಮತ್ತು  ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಲಾಗುವುದು, ಎಲ್ಲರ ಸಹಕಾರ ಪಡೆದು ಯೋಜನಾ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸುನೀಲ್ ಸುಬ್ರಮಣಿ ಅವರು ಹೇಳಿದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಪ್ರಸನ್ನ ಅವರು ಕುಂಡಾಮೇಸ್ತ್ರಿ ಕುಡಿಯುವ ನೀರು ಯೋಜನೆಗೆ 30 ಕೋಟಿ ರೂ. ಅಂದಾಜು ಮಾಡಲಾಗಿದೆ. ಇದುವರೆಗೆ 21 ಕೋಟಿ ರೂ. ಬಿಡುಗಡೆಯಾಗಿದ್ದು, 5.47 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ. 2016 ರಿಂದಲೇ ಕುಂಡಾಮೇಸ್ತ್ರಿಯಿಂದ ಕುಡಿಯುವ ನೀರನ್ನು ಕೂಟುಹೊಳೆಗೆ ಪೂರೈಕೆ ಮಾಡಲಾಗುತ್ತಿದೆ. ಕೂಟುಹೊಳೆಯಿಂದ ಮಡಿಕೇರಿ ನಗರಕ್ಕೆ ನೀರು ಸರಬರಾಜಾಗುತ್ತಿದೆ ಎಂದು ತಿಳಿಸಿದರು.

ಬಳಿಕ ಸುನೀಲ್ ಸುಬ್ರಮಣಿ ಅವರು ಕೂಟುಹೊಳೆ, ಹಳೇ ಖಾಸಗಿ ಬಸ್ ನಿಲ್ದಾಣ ಬಳಿಯ ತಡೆಗೋಡೆ ನಿರ್ಮಾಣ ಕಾಮಗಾರಿ ಮತ್ತು ಪಂಪಿನ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.

ನಗರಸಭೆ ಪೌರಾಯುಕ್ತರಾದ ಎಂ.ಎಲ್.ರಮೇಶ್, ಪ್ರಮುಖರಾದ ಪಿ.ಡಿ.ಪೊನ್ನಪ್ಪ, ಟಿ.ಎಸ್.ಪ್ರಕಾಶ್, ಕೆ.ಎಸ್.ರಮೇಶ್, ಶಿವಕುಮಾರಿ, ಅನಿತಾ ಪೂವಯ್ಯ, ಸವಿತಾ ರಾಕೇಶ್, ಮಹೇಶ್ ಜೈನಿ, ಅರುಣ್ ಕುಮಾರ್, ಮನು ಮಂಜುನಾಥ್, ಬಿ.ಕೆ.ಜಗದೀಶ್, ನಗರಸಭೆ ಎಇಇ ನಾಗರಾಜು, ವನಿತಾ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: