ಕ್ರೀಡೆ

ಐದು ಬಾರಿಯ ವಿಂಬಲ್ಡನ್ ಚಾಂಪಿಯನ್ ವೀನಸ್ ವೀಲಿಯಮ್ಸ್ ಗೆ ಸೋಲುಣಿಸಿದ 15ರ ಬಾಲಕಿ

ಲಂಡನ್,ಜು.2- ವಿಂಬಲ್ಡನ್ ಟೆನ್ನಿಸ್ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್ ವೀನಸ್ ವೀಲಿಯಮ್ಸ್ ಅನ್ನು 15 ವರ್ಷದ ಬಾಲಕಿ ಸೋಲಿಸಿ ವಿಶ್ವವೇ ಅವಳತ್ತ ನೋಡುವಂತೆ ಮಾಡಿದ್ದಾಳೆ.

ವಿಂಬಲ್ಡನ್ ಟೂರ್ನಿಯಲ್ಲಿ ಆಡಲು ವೈಲ್ಡ್ ಕಾರ್ಡ್ ಮೂಲಕ ಅವಕಾಶ ಪಡೆದ ಬಾಲಕಿ ಕೋರಿ ಗೌಫ್ ತನ್ನ ಪಾದಾರ್ಪಣೆ ಪಂದ್ಯದಲ್ಲೇ ಐದು ಬಾರಿ ವಿಂಬಲ್ಡನ್ ಮುಡಿಗೇರಿಸಿಕೊಂಡಿರುವ ವೀನಸ್ ವೀಲಿಯಮ್ಸ್ ಅನ್ನು ಸೋಲಿಸಿದ್ದಾಳೆ.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಮೊದಲ ಪಂದ್ಯ ಆಡಿದ ಆಕೆ 6-4, 6-4 ಅಂತರದಲ್ಲಿ ವಿಶ್ವ ಮಟ್ಟದ ಕ್ರೀಡಾ ಜರ್ನಿಯನ್ನು ಭರ್ಜರಿಯಾಗಿ ಆರಂಭಿಸಿದ್ದಾಳೆ.

ಕಳೆದ ನಾಲ್ಕು ದಿನದ ಹಿಂದೆ ಈ ಅಮೆರಿಕಾದ ಪುಟ್ಟ ಬಾಲೆ ವಿಂಬಲ್ಡನ್ ಆಡಲು ಅವಕಾಶ ಪಡೆದಿದ್ದರಿಂದ ಇಡೀ ಕ್ರೀಡಾ ಜಗತ್ತು ಆಕೆಯ ಕಡೆಗೆ ತಿರುಗಿ ನೋಡಿತ್ತು. ಕಾರಣ ಪ್ರತಿಷ್ಠಿತ ವಿಂಬಲ್ಡನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಪಡೆದ ಅತಿ ಕಿರಿಯವಳು ಎಂಬ ಹೆಗ್ಗಳಿಕೆ ಈಕೆಯದ್ದಾಗಿತ್ತು.

ಇದೀಗ ವೀನಸ್ ವೀಲಿಯಮ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ 1991ರ ಬಳಿಕ ಇದೇ ಮೊದಲ ಬಾರಿಗೆ ಟೆನ್ನಿಸ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಗೆಲುವು ದಾಖಲಿಸಿದ ಅತಿ ಚಿಕ್ಕ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಅವಕಾಶ ಪಡೆದ ಕೋರಿ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಳು. ಕೊಕೊ ಎಂಬ ನಿಕ್ ನೇಮ್ ಹೊಂದಿರುವ ಬಾಲಕಿಯ ಆರಾಧ್ಯ ಆಟಗಾರರಲ್ಲಿ ವೀನಸ್ ಕೂಡ ಒಬ್ಬರು ಎಂಬುದು ವಿಶೇಷ.

‘ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ನಾನು ಪಂದ್ಯದ ಬಳಿಕ ಅತ್ತಿದ್ದು ಇದೇ ಮೊದಲ ಬಾರಿ. ಗೆಲುವು ದಾಖಲಿಸುತ್ತೇನೆಂದು ನಿಜಕ್ಕೂ ಅಂದುಕೊಂಡಿರಲಿಲ್ಲ’ ಎಂದು ಕೋರಿ ಪ್ರತಿಕ್ರಿಯಿಸಿದ್ದಾಳೆ.

ನನ್ನ ತಂದೆ, ತಾಯಿಯ ಖುಷಿಗೆ ಪಾರವೇ ಇಲ್ಲ. ನಾನು ಒಂದೊಂದು ಪಾಯಿಂಟ್ ಗೆದ್ದಾಗಲೂ ಅಪ್ಪ ಕುಣಿದು ಕುಪ್ಪಳಿಸುತ್ತಿದ್ದರು. ನನ್ನ ತಂದೆ, ತಾಯಿ ತಮ್ಮೆಲ್ಲ ಸಮಯವನ್ನು ನನಗೆ ಮತ್ತು ನನ್ನ ಸಹೋದರರಿಗೆ ಮೀಸಲಿಟ್ಟಿದ್ದಾರೆ. ಅದಕ್ಕೆ ಪ್ರತಿಫಲವಾಗಿ ನಾವು ಸಾಧಿಸಿ ತೋರಿಸುತ್ತೇವೆ ಎಂದಾಕೆ ಹೇಳುತ್ತಾಳೆ.

ಅಭಿನಂದನೆಗಳು, ಹೀಗೆ ಮುಂದುವರಿ. ಗುಡ್ ಲಕ್ ಎಂದು ವಿಲಿಯಮ್ಸ್ ಶುಭ ಹಾರೈಸಿದ್ದಕ್ಕೆ ಆಕೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾಳೆ. (ಎಂ.ಎನ್)

Leave a Reply

comments

Related Articles

error: