
ಕರ್ನಾಟಕ
`ಚಂದ್ರಯಾನ-2’ ಉಡಾವಣೆಯನ್ನು ನೇರವಾಗಿ ವೀಕ್ಷಿಸಲು ಇಸ್ರೋ ಕಲ್ಪಿಸಿದೆ ಅವಕಾಶ
ಬೆಂಗಳೂರು,ಜು.3-‘ಚಂದ್ರಯಾನ-2’ ಬಾಹ್ಯಾಕಾಶ ನೌಕೆ ಉಡಾವಣೆಗೊಳ್ಳುವುದನ್ನು ನೇರವಾಗಿ ಕಣ್ತುಂಬಿಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಅವಕಾಶ ನೀಡುತ್ತಿದೆ.
ಅದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಆನ್ಲೈನ್ ನೋಂದಣಿ ಆರಂಭಿಸಲಿದೆ. ಇಸ್ರೋ ಇದೇ ಜು.4ರಂದು ಆನ್ಲೈನ್ ನೋಂದಣಿ ಪಕ್ರಿಯೆ ಆರಂಭಿಸುತ್ತಿದೆ. ಈ ಕುರಿತು ಇಸ್ರೋ ಟ್ವಿಟ್ ಮಾಡಿ ಮಾಹಿತಿ ನೀಡಿದೆ.
ಆನ್ಲೈನ್ ನೋಂದಣಿಗಾಗಿ ಯಾವುದೇ ಲಿಂಕ್ ಅಥವಾ ಮೈಕ್ರೋಸೈಟನ್ನಾಗಲಿ ಇಸ್ರೋ ನೀಡಿಲ್ಲ. ಅಲ್ಲದೆ, ನೋಂದಣಿ ಪ್ರಕ್ರಿಯೆ ಎಂದು ಕೊನೆಗೊಳ್ಳಲಿದೆ ಎಂಬುದನ್ನೂ ಇಸ್ರೋ ತಿಳಿಸಿಲ್ಲ. ಬಹುತೇಕ ಜು.3 ಅಥವಾ ನೋಂದಣಿ ಪ್ರಕ್ರಿಯೆ ಆರಂಭವಾದಾಗ ಈ ಎಲ್ಲ ಮಾಹಿತಿಗಳನ್ನೂ ಇಸ್ರೋ ನೀಡುವ ಸಾಧ್ಯತೆಗಳಿವೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸ್ಟೇಡಿಯಂ ಮಾದರಿಯ ವೀಕ್ಷಕರ ಗ್ಯಾಲರಿ ವ್ಯವಸ್ಥೆ ಇದೆ. 5000 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಗ್ಯಾಲರಿ ಹೊಂದಿದೆ. ಹೆಸರು ನೋಂದಣಿ ಮಾಡಿಕೊಂಡವರು ಈ ಗ್ಯಾಲರಿ ಮೂಲಕ ಉಡಾವಣೆಯನ್ನು ಕಣ್ತುಂಬಿಕೊಳ್ಳಬಹುದು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜು.15ರಂದು ಮುಂಜಾನೆ 2 ಗಂಟೆ 51 ನಿಮಿಷಕ್ಕೆ ಆರ್ಬಿಟರ್, ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಳಗೊಂಡ 3.8 ಟನ್ ತೂಕದ ‘ಚಂದ್ರಯಾನ-2’ ಉಪಕರಣಗಳನ್ನು ಹೊತ್ತ ‘ಜಿಎಸ್ಎಲ್ವಿ ಮಾರ್ಕ್ 3’ ರಾಕೆಟ್ ಉಡಾವಣೆಗೊಳ್ಳಲಿದೆ.
ಉಡಾವಣೆಗೊಳ್ಳುವ ಚಂದ್ರಯಾನ-2ನಲ್ಲಿರುವ ಲ್ಯಾಂಡರ್ ಸೆಪ್ಟೆಂಬರ್ 6 ಅಥವಾ 7ರಂದು ಚಂದ್ರನ ಕತ್ತಲೆಯ ಭಾಗದಲ್ಲಿ (ದಕ್ಷಿಣ ಧ್ರುವ) ಇಳಿಯಲಿದೆ. ನಂತರ ಅದರಲ್ಲಿರುವ ಪ್ರಜ್ಞಾನ್ ರೋವರ್ ಅಧ್ಯಯನ ಕಾರ್ಯ ಕೈಗೊಳ್ಳಲಿದೆ. (ಎಂ.ಎನ್)