ಮೈಸೂರು

ಮಿಶ್ರ ವಾಸ್ತವದ ಜಗತ್ತಿನಲ್ಲಿ ನಾವಿಂದು ಬದುಕುತ್ತಿದ್ದು, ಆಯ್ಕೆಗಳ ನೆಲೆಗಟ್ಟನ್ನು ಸ್ಪಷ್ಟಪಡಿಸಿಕೊಳ್ಳಬೇಕು : ಡಾ.ಕವಿತಾ ರೈ

ಮೈಸೂರು,ಜು.3:- ಮಿಶ್ರ ವಾಸ್ತವದ ಜಗತ್ತಿನಲ್ಲಿ ನಾವಿಂದು ಬದುಕುತ್ತಿದ್ದು, ಆಯ್ಕೆಗಳ ನೆಲೆಗಟ್ಟನ್ನು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಕರಾಮುವಿ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರಾಧ್ಯಾಪಕಿ ಡಾ.ಕವಿತಾ ರೈ ತಿಳಿಸಿದರು.

ಅವರಿಂದು   ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಪದವಿ ಪೂರ್ವ ಉಪನ್ಯಾಸಕರಿಗಾಗಿ ಕನ್ನಡ ಪಠ್ಯ ಬೋಧನೆ ಮತ್ತು ತರಬೇತಿ ಕುರಿತ ಐದು ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ವಿಷಯ ಕುರಿತು ಮಾತನಾಡಿದರು. ಯಾವುದೇ ವಿಷಯ ಪ್ರವೇಶಿಸಬೇಕಾದರೆ ಆಯ್ಕೆಗಳು, ಆದ್ಯತೆಗಳು ಬಹಳ ಮುಖ್ಯ. ಪ.ಪೂರ್ವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕಾದರೆ ಅವರಿಗೆ ಹತ್ತಿರದ, ಕುತೂಹಲ ಹುಟ್ಟಿಸುವ, ಅವರು ತಿಳಿದುಕೊಳ್ಳಬಹುದಾದ ವಿಷಯವನ್ನು ಹೇಳಬೇಕು. ಯಾವುದೇ ಪಠ್ಯವನ್ನು ತರಗತಿಯಲ್ಲಿ ಬೋಧಿಸುವುದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಓದಿಸುವ ಕ್ರಮವಿತ್ತು. ಪಠ್ಯ ಬೇಕಾದ ಹಾಗೆ ತರಗತಿಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಏನೆಂದರೆ ವಿದ್ಯಾರ್ಥಿಗಳು ಅದರ ಜೊತೆಗೆ ಹೆಚ್ಚು ಸಹವಾಸ ಇರುವ ಸನ್ನಿವೇಶವನ್ನು ಅಧ್ಯಾಪಕರು ನಿರ್ಮಾನ ಮಾಡುವುದು. ನಿರ್ದಿಷ್ಟವಾದ ಪಠ್ಯದ ಬಗ್ಗೆ ಅವರಿಗೆ ಒಂದು ಖಚಿತ, ಸ್ಪಷ್ಟವಾದ ತಿಳುವಳಿಕೆಯನ್ನು ಪೂರ್ವಭಾವಿಯಾಗಿ ಆ ಪಠ್ಯವನ್ನು ಓದಿಸುವುದು ಎಂದರು. ಹಳೆಗನ್ನಡ ಪಠ್ಯ ಓದಿಸುವುದು ಕಷ್ಟ. ನಡುಗನ್ನಡ ಕಷ್ಟಸಾಧ್ಯ. ಆಧುನಿಕ ಪಠ್ಯ ಓದಿಸಲು ವಿದ್ಯಾರ್ಥಿಗಳು ಕಂಪರ್ಟೆಬಲ್ ಆಗಿ ಅಪ್ಯಾಯಮಾನವಾದ ಭಾವನಾತ್ಮಕ ನೆಲೆ ಕಂಡುಕೊಳ್ಳುತ್ತಾರೆ ಎಂದು ತಿಳಿಸಿದರು.

ಮನುಷ್ಯ ಆಯ್ಕೆಗಳ ಸರಮಾಲೆ. ಬದುಕಿನಲ್ಲಿ ಆಯ್ಕೆಗಳನ್ನು ಮಾಡುತ್ತಾ ಬರುತ್ತಾರೆ. ಮನುಷ್ಯ ಬೇರೆಯಲ್ಲ, ಆಯ್ಕೆಗಳ ಸರಮಾಲೆ ಬೇರೆಯಲ್ಲ.  ಎಲ್ ಪಿಜಿ ಯುಗದಲ್ಲಿರುವ ನಮಗೆ ಆಯ್ಕೆಗಳೇ ಇಲ್ಲ, ನಮ್ಮ ಆಯ್ಕೆಗಳನ್ನು ಬೇರೆಯವರು ಮಾಡ್ತಿದ್ದಾರೆ. ಮಿಶ್ರ ವಾಸ್ತವದ ಜಗತ್ತಿನಲ್ಲಿ ನಾವಿಂದು ಬದುಕುತ್ತಿದ್ದೇವೆ. ಭಾಷೆ ಹೇಗೆ ಬದಲಾಗುತ್ತಿದೆಯೋ, ಸನ್ನಿವೇಶ ಕೂಡ ಹಾಗೇ ಬದಲಾಗುತ್ತಿದೆ. ಆಯ್ಕೆಗಳ ನೆಲೆಗಟ್ಟನ್ನು ಸ್ಪಷ್ಟಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಗ್ರಹಿಸುವಿಕೆಯ, ಅರ್ಥೈಸುವಿಕೆಯ ದೋಷವಿಲ್ಲ. ಆಯ್ಕೆ ಮಾಡಿಕೊಳ್ಳಬೇಕೆಂಬುದರ ವಿಲಕ್ಷಣ ಸಂದರ್ಭದಲ್ಲಿದ್ದಾರೆ. ಆಂತರಿಕ ಜಗತ್ತನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. 10ನೇ ತರಗತಿಯ ನಂತರ, 12ನೇ ತರಗತಿಗೆ ಮೊದಲು ಅಂತರಂಗ ರೂಪಿಸಿಕೊಳ್ಳಬೇಕಾಗಿರುವುದು ಮುಖ್ಯ. ಗುರು, ಪುಸ್ತಕ, ಸ್ವಅಧ್ಯಯನಗಳಿಂದ ಅಂತರಂಗ ರೂಪುಗೊಳ್ಳಲಿದೆ ಎಂದರು.

ಈ ಸಂದರ್ಭ ಅಸೋಸಿಯೇಟ್ ಫೆಲೋ ಡಾ.ರಾಧಾಮಣಿ ಎಂ.ಎ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: