
ಮೈಸೂರು
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರಕೃತಿ ಉಳಿಸಿ, ನೆಲ, ಜಲ,ಕಾಡು ಲೂಟಿ ತಪ್ಪಿಸಿ ಬೃಹತ್ ಜನಾಂದೋಲನಕ್ಕೆ ಚಾಲನೆ
ಮೈಸೂರು,ಜು.4:- ಅರಣ್ಯ ಸಂಪತ್ತನ್ನು ಲೂಟಿಗೈದು ಮರಗಳನ್ನು ಬರಿದು ಮಾಡುತ್ತ ಅಭಿವೃದ್ಧಿ ಹೆಸರಿನಲ್ಲಿ ಕಲ್ಲುಗಿಡ್ಡಗಳನ್ನು ಮಾಯಮಾಡಿ ಇತ್ತೀಚೆಗೆ ಮಳೆಗಾಗಿ ಮೋಡಬಿತ್ತನೆಗೆ ಮೊರೆ ಹೋಗುತ್ತಿರುವ ಸರ್ಕಾರಗಳನ್ನು ಕಾಡಿನತ್ತ ಮುಖ ಮಾಡುವಂತೆ ಮಾಡಲು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಇಂದು ಅರಮನೆ ಮುಂಭಾಗದಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದವರೆಗೆ ಪ್ರಕೃತಿ ಉಳಿಸಿ, ನೆಲ, ಜಲ,ಕಾಡು ಲೂಟಿ ತಪ್ಪಿಸಿ ಬೃಹತ್ ಜನಾಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಮಾತನಾಡಿದ ವೇದಿಕೆ ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್ ಜಿಲ್ಲಾಪಂಚಾತ್ ವತಿಯಿಂದ ಕಳೆದ 20ವರ್ಷಗಳಿಂದ 50ಸಾವಿರ ಕೋಟಿರೂ.ಗಳಿಗೂ ಹೆಚ್ಚು ಹಣವನ್ನು ಕೊಳವೆಬಾವಿ ಕೊರೆತಕ್ಕೆ ವಿನಿಯೋಗಿಸಿರುವುದು ದುರಂತದ ಸಂಗತಿ. ಇಷ್ಟೇ ಹಣವನ್ನು ಮಳೆನೀರು ಸಂಗ್ರಹಣೆ, ಅಂತರ್ಜಲ ಮರುಪೂರಣ ಕಾರ್ಯಕ್ರಮಗಳು, ಕಾಡು ಬೆಳೆಸಲು ವಿನಿಯೋಗಿಸಿದ್ದರೆ ನಾಡಿಗರಿಗೆ ಬರತಲೆದೋರುತ್ತಿರಲಿಲ್ಲ. ಹೊರರಾಜ್ಯದಿಂದ ಬಂದಂತಹ ಬೃಹತ್ ಉದ್ದಿಮೆ ಕಟ್ಟಡ ಕಟ್ಟಲು, ರಾಜ್ಯದ ನದಿ, ತೊರೆ ಹಳ್ಳಗಳ ಮರಳನ್ನು ಎತ್ತಿದ ಪರಿಣಾಮ ಅಂತರ್ಜಲ ಬರಿದಾಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ಮರಗಳ ಹನನ ಎಗ್ಗಿಲ್ಲದೆ ಸಾಗಿದೆ ಎಂದರು. ಹೊರದೇಶಗಳಲ್ಲಿ ಒಂದು ಕಾಮಗಾರಿಯು 25 ವರ್ಷಕ್ಕೂ ಹೆಚ್ಚು ಅವಧಿಗೆ ಬಾಳಿಕೆಯಿದ್ದು, ನಮ್ಮ ರಾಜ್ಯದಲ್ಲಿ ಒಂದು ಕಾಮಗಾರಿ 1ರಿಂದ 2ವರ್ಷ ಇರುವುದೇ ಹೆಚ್ಚು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಕೃತಿ ಉಳಿಸಿ ಮುಂದಿನ ಪೀಳಿಗೆಗೆ ಜೀವಜಲ, ಪರಿಶುದ್ಧ ಗಾಳಿಯನ್ನು ಉಳಿಸುವ ಹೊಣೆಯನ್ನು ಅರಿತು ಜನರ ನಡಿಗೆ ಕಾಡಿನತ್ತ ಹೊರಳಬೇಕೆಂಬ ಆಶಯದೊಂದಿಗೆ ವೇದಿಕೆಯ ವತಿಯಿಂದ ಅರಮನೆ ಮುಂಭಾಗದಿಂದ ಪಾದಯಾತ್ರೆ ಮೂಲಕ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗಿಡನೆಟ್ಟು ವಿಶೇಷ ಪೂಜೆ ಅರ್ಪಿಸಲಾಗುತ್ತದೆ ಎಂದರು.
ವೇದಿಕೆಯ ಸದಸ್ಯರು ಈ ಸಂದರ್ಭ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)