ಪ್ರಮುಖ ಸುದ್ದಿ

ಚೇರಂಡ ಕುಟುಂಬಸ್ಥರಿಂದ ಮಳೆಹಾನಿ ಸಂತ್ರಸ್ತರಿಗೆ ಆರ್ಥಿಕ ನೆರವು ವಿತರಣೆ

ರಾಜ್ಯ(ಮಡಿಕೇರಿ) ಜು.5 : – ಕಳೆದ ವರ್ಷ ಸಂಭವಿಸಿದ ಮಳೆಹಾನಿ ಸಂತ್ರಸ್ತರಿಗೆ ಚೇರಂಡ ಕುಟುಂಬಸ್ಥರು ಆರ್ಥಿಕ ನೆರವು ವಿತರಿಸಿದರು. ನಗರದ ಫೋರ್ಟ್ ಮರ್ಕರ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 15 ಮಂದಿ ಸಂತ್ರಸ್ತರಿಗೆ ತಲಾ ಹತ್ತು ಸಾವಿರ ರೂ. ಗಳಂತೆ ಒಟ್ಟು 1.50 ಲಕ್ಷ ರೂ. ಗಳನ್ನು ಚೆಕ್ ರೂಪದಲ್ಲಿ ನೀಡಲಾಯಿತು.
ಕುಟುಂಬದ ಹಿರಿಯರಾದ ಚೇರಂಡ ಉತ್ತಯ್ಯ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದ ಅನೇಕ ಸಾವು, ನೋವುಗಳು ಸಂಭವಿಸಿದ್ದು, ವಿವಿಧ ಸಂಘ ಸಂಸ್ಥೆಗಳು ತಕ್ಷಣದಲ್ಲಿ ಸಂತ್ರಸ್ತರ ನೋವಿಗೆ ಸ್ಪಂದಿಸಿರುವುದು ಶ್ಲಾಘನೀಯ. ಸಂತ್ರಸ್ತರು ತಮಗೆ ದೊರೆತ ಸಹಾಯಧನವನ್ನು ಸದುಯೋಗಪಡಿಸಿಕೊಂಡು ಹಳೆಯ ನೋವನ್ನು ಮರೆತು ಹೊಸ ಜೀವನವನ್ನು ಆರಂಭಿಸುವಂತೆ ಕಿವಿಮಾತು ಹೇಳಿದರು.
ಪ್ರಮುಖರಾದ ಡಾ. ಸೂರ್ಯಮುದ್ದಪ್ಪ ಮಾತನಾಡಿ, ಸಂತ್ರಸ್ತರು ಸಂಕಷ್ಟ ಎದುರಾಗಿದೆ ಎಂಬ ಕಾರಣಕ್ಕಾಗಿ ಎದೆಗುಂದದೆ, ಧೈರ್ಯದಿಂದ ಮುನ್ನುಗ್ಗಬೇಕು. ಸಂಘ ಸಂಸ್ಥೆಗಳು ನೀಡುವ ಸಹಕಾರದ ಜೊತೆಗೆ ತಮ್ಮ ಶಕ್ತಿ ಸಾಮಥ್ರ್ಯವನ್ನು ಬಳಸಿಕೊಂಡು ಮತ್ತೆ ಎಂದಿನಂತಾಗಬೇಕು ಎಂದರು.
ಪ್ರಕೃತಿ ವಿಕೋಪದ ದುರಂತದಿಂದ ಸ್ವಲ್ಪಮಟ್ಟಿಗಿನ ಚೇತರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಿರಲಿ ಎಂದರು.
ಪೂಮಾಲೆ ಪತ್ರಿಕೆಯ ಸಂಪಾದಕ ಮಹೇಶ್ ನಾಚಯ್ಯ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ವಿವಿಧ ಭಾಗಗಳಿಂದ ಪರಿಹಾರ ಹರಿದು ಬಂದಿದ್ದರೂ ತಮಗೆ ಇನ್ನೂ ಪರಿಹಾರ ದೊರೆತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿರುವುದು ವಿಷಾದನೀಯವೆಂದರು.
ಹಿರಿಯರು ರಕ್ಷಿಸಿಕೊಂಡು ಬಂದಿರುವ ಭೂಮಿಯನ್ನು ನಾಶ ಮಾಡಿಕೊಂಡು ಬರುತ್ತಿರುವುದು ಪ್ರಕೃತಿ ವಿಕೋಪಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಕೊಡಗಿನ ಮೂಲ ಸಂಸ್ಕೃತಿ, ಆಚಾರ, ವಿಚಾರಗಳ ಆರಾಧನೆ ನಿರಂತರ ನಡೆಯುತ್ತಿರಬೇಕೆಂದರು.
ಕಾರ್ಯಕ್ರಮದಲ್ಲಿ ಚೇರಂಡ ಕುಟುಂಬಸ್ಥರುಗಳಾದ ಗಣೇಶ್ ಗಣಪತಿ, ಚೋಟು ಕಾರ್ಯಪ್ಪ, ಜಪ್ಪು ದೇವಯ್ಯ, ಶಿವಾಜಿ ಸೋಮಯ್ಯ, ಜಿಮ್ಮಿ ಅಚ್ಚಯ್ಯ, ದೇವಯ್ಯ, ಗಿರೀಶ್ ಪೂಣಚ್ಚ, ಸಂಪತ್, ಬೋಪಣ್ಣ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: