ಪ್ರಮುಖ ಸುದ್ದಿಮೈಸೂರು

ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ : ಹರಿದು ಬಂದ ಭಕ್ತಸಾಗರ ; ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು,ಜು.5:- ಮೊದಲ ಆಷಾಢ ಶುಕ್ರವಾರದ ನಿಮಿತ್ತ ಇಂದು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದ್ದು ಬರುತ್ತಿದೆ.  ಇಂದು ಮುಂಜಾನೆ 3 ಗಂಟೆಯಿಂದಲೇ ದೇವಾಲಯ ಸಮೀಪವಿರುವ ದೇವಿ ಕೆರೆಯಿಂದ ಜಲವನ್ನು ತಂದು ಚಾಮುಂಡೇಶ್ವರಿ ದೇವಿಗೆ ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಭಿಷೇಕದ ನಂತರ ವಿಶೇಷ ಅಲಂಕಾರ, ಕುಂಕುಮಾರ್ಚನೆ ಹಾಗೂ ಸಹಸ್ರನಾಮಾರ್ಚನೆ ಮಾಡಿ ಷೋಡಶೋಪಚಾರ ಪೂಜೆ ನೆರವೇರಿಸಲಾಯಿತು.

ಮೊದಲನೇ ಆಷಾಢ ಶುಕ್ರವಾರದ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ.  ದೇವಾಲಯದ ಒಳ, ಹೊರಾವರಣ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ.

ಮುಂಜಾನೆ 5 ಗಂಟೆಯಿಂದ ದೇವಿಯ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಆಷಾಢ ಶುಕ್ರವಾರದ ನಿಮಿತ್ತ ಇಂದು ದೇವಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, 9ಗಂಟೆಗೆ ದೇವಾಲಯದ ಆವರಣದಲ್ಲಿಯೇ ಪ್ರಾಕಾರೋತ್ಸವ ನೆರವೇರಿತು. ನಾಡ ಅಧಿದೇವತೆಯಾಗಿ ಚಾಮುಂಡಿಬೆಟ್ಟದ ಮೇಲೆ ನೆಲೆನಿಂತಿರುವ ಚಾಮುಂಡೇಶ್ವರಿಯನ್ನು ಆಷಾಢದಲ್ಲಿ ಅದರಲ್ಲೂ ಶುಕ್ರವಾರದಂದು ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆಯಲ್ಲದೆ ಆಯುರಾರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಶಕ್ತಿ ದೇವತೆ ದರ್ಶನ ಪಡೆದರೆ ಒಳಿತಾಗುತ್ತದೆ. ಅದರಲ್ಲೂ ಜ್ಞಾನ ಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಇರುವ ಚಾಮುಂಡಿತಾಯಿಗೆ ಆಷಾಢ ಮಾಸದಲ್ಲಿ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಧರ್ ದೀಕ್ಷಿತ್ ತಿಳಿಸಿದರು.

ಇಂದು ಮುಂಜಾನೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡೇಶ್ವರಿಯ ದರ್ಶನ ಪಡೆದರು. ಇಂದು ಮುಂಜಾನೆ  ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಕುಟುಂಬದವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಿ ದರ್ಶನಕ್ಕಾಗಿ ಭಕ್ತಾದಿಗಳಿಗೆ ನಾಲ್ಕು ಸರತಿ ಸಾಲುಗಳ ವ್ಯವಸ್ಥೆ ಮಾಡಲಾಗಿದ್ದು, ಧರ್ಮದರ್ಶನ  59ರೂ.ಟಿಕೇಟ್ 300 ಟಿಕೆಟ್ ಪಡೆದವರಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡಲಾಗಿದೆ.  ಗಣ್ಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸಿ ಎಲ್ಲಾ ಕಡೆ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ.   ಬೆಳಗಿನ ಜಾವ ಚುಮುಚುಮು ಚಳಿಯಲ್ಲಿಯೂ ಲಕ್ಷಾಂತರ ಮಂದಿ ಭಕ್ತರು 1001 ಮೆಟ್ಟಿಲುಗಳನ್ನು ಹತ್ತಿ ಬಂದು ಸರತಿ ಸಾಲಿನಲ್ಲಿ ದೇವಿ ದರ್ಶನ ಪಡೆದರು.  ಹಲವಾರು ಮಂದಿ ಭಕ್ತರು ಪ್ರತಿ ಮೆಟ್ಟಿಲುಗಳಿಗೂ ಅರಿಶಿನ, ಕುಂಕುಮ ಹೂ ಇಟ್ಟು ಪೂಜೆ ಸಲ್ಲಿಸಿ ಮೆಟ್ಟಿಲು ಹತ್ತುತ್ತಿರುವುದು ಕಂಡು ಬಂತು.

ಭಕ್ತಾದಿಗಳ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದು, ಮೈಸೂರು ಸಮೀಪದ ರಜತ ಮಹಲ್ ಹೆಲಿಪ್ಯಾಡ್‍ನಲ್ಲಿ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಉಚಿತವಾಗಿ 10ಕ್ಕೂ ಹೆಚ್ಚು ಬಸ್‍ಗಳ ವ್ಯವಸ್ಥೆ  ಮಾಡಲಾಗಿದೆ. ಬೆಟ್ಟದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಆಷಾಢ ಶುಕ್ರವಾರ ಪ್ರಯುಕ್ತ  ಚಾಮುಂಡಿ ಬೆಟ್ಟದ ಸುತ್ತಲೂ ವಿಶೇಷ ಅಲಂಕಾರಮಾಡಿರುವುದು ಭಕ್ತರ ಗಮನ ಸೆಳೆಯುತ್ತಿದೆ.

ದೇವಸ್ಥಾನ ಪ್ರವೇಶಕ್ಕೂ ಮುನ್ನ ಮಹಿಷಾಸುರನ ಪ್ರತಿಮೆಯಿರುವ ವೃತ್ತಕ್ಕೆ ಹೂವಿನಿಂದ ಅಲಂಕರಿಸಲಾಗಿದ್ದು, ದೇವಸ್ಥಾನದಿಂದ ವಾಪಸ್ ಬರುವಾಗ ಭಕ್ತರು ಸೆಲ್ಫಿ ತೆಗೆಕೊಳ್ಳುತ್ತಿರುವುದು ಕಂಡು ಬರುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: