ಕರ್ನಾಟಕದೇಶ

ಅತಿದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರ ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ ಆರಂಭ

ಬೆಂಗಳೂರು: ದೇಶದ ಅತಿದೊಡ್ಡದು ಎನ್ನಬಹುದಾದ ಕೌಶಲ ಅಭಿವೃದ್ಧಿ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲು ಚಿಂತಿಸಲಾಗಿದೆ. ಈ ಕೇಂದ್ರವು ಶೀಘ್ರವೇ ಕಾರ್ಯಾರಂಭ ಮಾಡಲಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆಯ 7 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ವಸತಿ ಸೌಲಭ್ಯವನ್ನೂ ಒಳಗೊಂಡಂತೆ ಈ ಅತ್ಯಾಧುನಿಕ  ಕೇಂದ್ರ ತಲೆಎತ್ತಲಿದೆ.

ದೇಶಪಾಂಡೆ ಫೌಂಡೇಷನ್‌ ಆರಂಭಿಸಲಿರುವ ಈ ಕೇಂದ್ರದಲ್ಲಿ  ಒಂದು ಬಾರಿಗೆ ಸಾವಿರ ಮಹಿಳೆಯರು ಮತ್ತು ಸಾವಿರದ ನೂನೂರು ಪುರುಷರ ವೃತ್ತಿ ಕೌಶಲ ಅಭಿವೃದ್ಧಿಪಡಿಸುವುದು ಈ ಫೌಂಡೇಷನ್‍ನ ಉದ್ದೇಶವಾಗಿದೆ. ವರ್ಷದಲ್ಲಿ ಗರಿಷ್ಠ 5 ಸಾವಿರದಷ್ಟು ಆಕಾಂಕ್ಷಿಗಳ ವೃತ್ತಿ ಕೌಶಲ ಹೆಚ್ಚಿಸಿ ಉದ್ಯೋಗಕ್ಕೆ ಸೇರ್ಪಡೆಗೊಳಿಸುವ ಗುರಿ ನಿಗದಿ ಮಾಡಲಾಗಿದೆ ಎಂದು ಫೌಂಡೇಷನ್‌ ಸಿಇಒ ನವೀನ್‌ ಝಾ ತಿಳಿಸಿದ್ದಾರೆ.

5 ರಿಂದ 6 ತಿಂಗಳ ಅವಧಿಯ ಈ ಕೌಶಲ ಅಭಿವೃದ್ಧಿ ತರಬೇತಿಯಲ್ಲಿ ಊಟ, ವಸತಿ ಸೇರಿದಂತೆ ವಿದ್ಯಾರ್ಥಿಗಳು 25 ರಿಂದ 30ಸಾವಿರ ರೂಪಾಯಿವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಕೌಶಲ ವೃದ್ಧಿಗೆ ತಗುಲುವ ಹೆಚ್ಚುವರಿ ವೆಚ್ಚವನ್ನು ಕಾರ್ಪೊರೇಟ್‌ ನೆರವಿನಿಂದ ತುಂಬಿಸಲಾಗುವುದು. ಮೂಲತಃ ಹುಬ್ಬಳ್ಳಿಯವರಾದ ಸದ್ಯಕ್ಕೆ ಅಮೆರಿಕದಲ್ಲಿ ನೆಲೆಸಿರುವ ಉದ್ಯಮಿ ಡಾ.ಗುರುರಾಜ್‌ ದೇಶಪಾಂಡೆ ಅವರು ತಮ್ಮ ಸ್ವಂತ ಬಂಡವಾಳ ತೊಡಗಿಸಿ ಈ ಕೇಂದ್ರ ಆರಂಭಿಸುತ್ತಿ ದ್ದಾರೆ. ಇದುವರೆಗೆ 60 ಕೋಟಿ ರೂ.ಗಳಷ್ಟು ಮೊತ್ತ ಹೂಡಿಕೆ ಮಾಡಿದ್ದಾರೆ.

ಗುರುಕುಲ ಮಾದರಿಯಲ್ಲಿ ವಾರದ ಏಳೂ ದಿನಗಳ ಕಾಲ ಇಲ್ಲಿ ಕಲಿಕಾರ್ಥಿಗಳ ವ್ಯಕ್ತಿತ್ವ ವಿಕಸನ, ಕೌಶಲ ಅಭಿವೃದ್ಧಿಯ ವಿವಿಧ ಬಗೆಯ ತರಬೇತಿ ಕಾರ್ಯಕ್ರಮ ಇರಲಿವೆ. ಕ್ಯಾಂಪಸ್‌ ನೇಮಕಾತಿ ಮಾದರಿಯಲ್ಲಿ  ಇಲ್ಲಿಯೂ ತರಬೇತಿ ಅವಧಿಯಲ್ಲಿಯೇ ನೇಮಕಾತಿ ಸೌಲಭ್ಯ ಇರಲಿದೆ. ಸ್ವತಂತ್ರವಾಗಿ ಉದ್ದಿಮೆ, ಕೈಗಾರಿಕೆ ಆರಂಭಿಸುವವರಿಗೆ ಸಾಲದ ನೆರವು ನೀಡುವ ಸಹಕಾರಿ ಸಂಘವೂ ಫೌಂಡೇಷನ್‌ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದವರಿಂದ ಆರಂಭಿಸಿ ಸ್ನಾತಕೋತ್ತರ ಪದವಿ ಪಡೆದವರ ವೃತ್ತಿ ಕೌಶಲ ಹೆಚ್ಚಿಸುವ ಕಾರ್ಯಕ್ರಮಗಳು ಇರಲಿವೆ. ದೇಶದಾದ್ಯಂತ ಕಲಿಕಾರ್ಥಿಗಳಿಗೆ ಇಲ್ಲಿ ಪ್ರವೇಶ ಅವಕಾಶ ಇರಲಿದೆ. ಗ್ರಾಮೀಣ ಮತ್ತು ಸಣ್ಣ ಪುಟ್ಟ ನಗರಗಳ ಕಲಿಕಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಮಾಹಿತಿಗೆ ಉಚಿತ ಕರೆ ಸಂಖ್ಯೆ 1800 3010 1221, e-mail: [email protected] / www.detedu.org ಸಂಪರ್ಕಿಸಬಹುದು.

Leave a Reply

comments

Related Articles

error: