ಪ್ರಮುಖ ಸುದ್ದಿ

ನರೇಂದ್ರ ಮೋದಿ ಸರ್ಕಾರದ ಬಜೆಟ್​ ಮಂಡನೆಗೆ ವೇದಿಕೆ ಸಜ್ಜು : ಬಟ್ಟೆಯಲ್ಲಿ ಸುತ್ತಿ ಬಜೆಟ್​ ಪ್ರತಿ ತಂದ ಸಚಿವೆ ನಿರ್ಮಲಾ ಸೀತಾರಾಮನ್

ದೇಶ(ನವದೆಹಲಿ)ಜು.5:- ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಸರ್ಕಾರದ ಆಯವ್ಯಯ ಮಂಡನೆಗೆ ವೇದಿಕೆ ಸಜ್ಜಾಗಿದ್ದು, ಇಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್​ 11 ಗಂಟೆಗೆ ಬಜೆಟ್​ ಮಂಡಿಸಲಿದ್ದಾರೆ.

ಸಂಸತ್​ ಭವನಕ್ಕೆ ನಿರ್ಮಲಾ ಸೀತಾರಾಮನ್​ ಅವರು ಆಗಮಿಸಿದ್ದು, ​ ಹೊಸ ಸರ್ಕಾರದ ಮೊದಲ ಬಜೆಟ್​ಗೆ ಸಚಿವ ಸಂಪುಟದ ಅನುಮೋದನೆ ಪಡೆಯಲಿದ್ದಾರೆ. ಬಜೆಟ್​ ಮಂಡನೆಗಾಗಿ ಸಂಸತ್​ ಭವನಕ್ಕೆ ತೆರಳುವ ಮುನ್ನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಮೊದಲ ಬಾರಿ ಬಜೆಟ್​ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಪ್ರತಿಯನ್ನು ಬ್ರೀಫ್​ಕೇಸ್​ ಬದಲು ಕೆಂಪು ಬಟ್ಟೆಯಲ್ಲಿ ಸುತ್ತಿ ವಿತ್ತ ಸಚಿವಾಲಯದಿಂದ ಹೊರಗೆ ತಂದಿರುವುದು ಕಂಡು ಬಂದಿದೆ. ಇದುವರೆಗೆ ವಿತ್ತ ಸಚಿವರು ಬ್ರೀಫ್​ಕೇಸ್​ನಲ್ಲಿ ಬಜೆಟ್​ ಪ್ರತಿ ತರುತ್ತಿರುವುದು ಕಾಣಿಸುತ್ತಿತ್ತು. ಈ ಕುರಿತು   ಮುಖ್ಯ ಹಣಕಾಸು ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್​ ಪ್ರತಿಕ್ರಿಯಿಸಿದ್ದು,  ಇದು ಭಾರತೀಯ ಸಂಪ್ರದಾಯ. ಪಾಶ್ಚಾತ್ಯ ಚಿಂತನೆಗಳ ಗುಲಾಮಗಿರಿಯಿಂದ ಹೊರಬರುವ ಸಂಕೇತವಿದು ಎಂದು ತಿಳಿಸಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್‌, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌, ಹಣಕಾಸು ಕಾರ್ಯದರ್ಶಿ ಎಸ್‌ ಸಿ ಗರ್ಗ್‌, ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮತ್ತು ಇತರೆ ಅಧಿಕಾರಿಗಳು ಹಣಕಾಸು ಸಚಿವಾಲಯದ ಹೊರಗೆ ಸಂಪುಟ ಸಭೆಗೂ ಮುನ್ನ ಕಂಡು ಬಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: