ಕರ್ನಾಟಕ

ಕರ್ನಾಟಕದಲ್ಲಿ ಮದ್ಯ ನಿಷೇಧಿಸುವಂತೆ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಆಗ್ರಹ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರ ಬೇಡಿಕೆಯನ್ನು ಪರಿಗಣಿಸಿ ಕರ್ನಾಟಕದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದು ಹೋರಾಟಗಾರ್ತಿ ಮೇಧಾ ಪಾಟ್ಕರ್ ಆಗ್ರಹಿಸಿದ್ದಾರೆ..

ಆಳಂದದಲ್ಲಿ ಮಹಿಳಾ ಜನಜಾಗೃತಿ ಆಂದೋಲನ ಸಮಿತಿಯು ಶನಿವಾರ ಆಯೋಜಿಸಿದ್ದ ಸ್ತ್ರೀಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸರ್ಕಾರದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ನಷ್ಟವಾಗುತ್ತದೆ ಎಂದು ಒಂದು ರಾಜ್ಯದ ಮುಖ್ಯಮಂತ್ರಿ ಜನರ ಜೀವದ ಜೊತೆ ಚೆಲ್ಲಾಟ ಆಡಬಾರದು. ಮದ್ಯದಿಂದ ಸಂಗ್ರಹಿಸುವ ಹಣ ಪಾಪದ ಹಣವಾಗಿದೆ. ಮದ್ಯದ ಮಾರಾಟದಿಂದ ಸರ್ಕಾರಕ್ಕೆ ಆದಾಯ ಬಂದರೂ ವ್ಯಸನಿಗಳ ಕುಟುಂಬ ಬೀದಿಗೆ ಬರುವುದರಿಂದ ನಿಜವಾದ ಅಭಿವೃದ್ಧಿ ಆಗುವುದಿಲ್ಲ ಎಂದರು.

ಜನರ ಆರೋಗ್ಯಕ್ಕಿಂತ ಹಣ ಸಂಗ್ರಹ ಮುಖ್ಯವಾಗಿದ್ದರೆ ರಾಜ್ಯದ ಪ್ರತೀ ಮಹಿಳೆಯರೂ ಹಣ ಸಂಗ್ರಹಿಸಿ ಸರ್ಕಾರಕ್ಕೆ ಕೊಡಲು ಮುಂದಾಗಬೇಕು ಎಂದು ಕರೆ ನೀಡಿದ ಅವರು ಮದ್ಯ ನಿಷೇಧಿಸಿದರೆ ಹಣವೆಲ್ಲ ಗ್ರಾಮದಲ್ಲೆ ಉಳಿಯುತ್ತದೆ. ಇದರಿಂದ ಕೃಷಿ ಸಂಬಂಧಿತ ಚಟುವಟಿಕೆಗಳು ಅಭಿವೃದ್ಧಿಯಾಗಿ ಸರ್ಕಾರಕ್ಕೆ ಪರೋಕ್ಷವಾಗಿ ಆದಾಯ ಬರುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ಮುಖ್ಯಮಂತ್ರಿಯಾಗಿದ್ದಾಗ ಮದ್ಯ ನಿಷೇಧಿಸಿದ್ದು ಬರೀ ಕಾಗದಕ್ಕೆ ಸೀಮಿತವಾಗಿದೆ. ಕರೆ ಮಾಡಿದರೆ ಮನೆಗೆ ಮದ್ಯ ತಲುಪಿಸುವ ವ್ಯವಸ್ಥೆ ಅವ್ಯಾಹತವಾಗಿ ನಡೆಯುತ್ತಿದೆ. ಸಾಮಾಜಿಕ ಕಾಳಜಿಯಿಂದ ಮದ್ಯ ನಿಷೇಧಿಸಿದರೆ ಮಾತ್ರ ಪರಿಣಾಮಕಾರಿಯಾಗುತ್ತದೆ. ಬಿಹಾರದಲ್ಲಿ ಮದ್ಯ ನಿಷೇಧಿಸಿದ್ದಲ್ಲದೆ, ಈಗ ಮದ್ಯ ತಯಾರಿಸುವ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವುದಕ್ಕೆ ಸರ್ಕಾರ ತೀರ್ಮಾನಿಸಿದೆ ಎಂದರು.

ಅಕ್ಕಿ, ಬೇಳೆ ಕೊಡುತ್ತೀರೋ ಇಲ್ಲವೋ ಆದರೆ, ಮದ್ಯ ಮಾರಾಟ ನಿಷೇಧ ಮಾಡಿ ಎಂದು ಆಳಂದ ತಾಲ್ಲೂಕು ಮಹಿಳೆಯರು ಹೋರಾಟ ಆರಂಭಿಸಿದ್ದು, ಇದಕ್ಕೆ ಶಾಸಕ ಬಿ.ಆರ್. ಪಾಟೀಲ ಬೆಂಬಲಿಸಿದ್ದಾರೆ. ಮದ್ಯ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಪ್ರತಿ ಗ್ರಾಮದಲ್ಲೂ ಮಹಿಳೆಯರು ಒತ್ತಾಯಿಸುತ್ತಿದ್ದಾರೆ ಎಂದು ಶಾಸಕರು ನನಗೆ ಮನವರಿಕೆ ಮಾಡಿದ್ದಾರೆ ಎಂದರು.

Leave a Reply

comments

Related Articles

error: