ಮೈಸೂರು

ಮಕ್ಕಳನ್ನು ಅನರ್ಘ್ಯ ರತ್ನಗಳಂತೆ ಬೆಳೆಸುವುದು ಪೋಷಕರ ಜವಾಬ್ದಾರಿ : ಪ್ರೊ.ಶೇಖ್ ಅಲಿ

ಮಳಲಿ ಕುಟುಂಬ ಮತ್ತು ಕರ್ನಾಟಕ ವಿಚಾರ ವೇದಿಕೆ ವತಿಯಿಂದ ಭಾನುವಾರ ಎಂಜಿನಿಯರುಗಳ ಸಂಸ್ಥೆಯಲ್ಲಿ ಪ್ರೊ.ವಸು ಮಳಲಿ ಅವರ ‘ಗಡಿಗಳು ಗೋಡೆಗಳೇ?’ ಕೃತಿ ಲೋಕಾರ್ಪಣೆ ಮತ್ತು ವಸು ಮಳಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಶಸ್ತಿ ಪ್ರದಾನ ಮಾಡಿದ ಅಂತಾರಾಷ್ಟ್ರೀಯ ಇತಿಹಾಸ ತಜ್ಞ ಮತ್ತು ವಿಶ್ರಾಂತ ಕುಲಪತಿಗಳಾದ ಪ್ರೊ.ಶೇಖ್ ಅಲಿ ಅವರು ಮಾತನಾಡಿ, ಮಕ್ಕಳನ್ನು ಕೇವಲ ಮಕ್ಕಳನ್ನಾಗಿ  ಬೆಳೆಸದೇ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡುವ ಅನರ್ಘ್ಯ ರತ್ನಗಳಂತೆ ಬೆಳೆಸಬೇಕು. ಅದು ಪೋಷಕರ ಗುರುತರ ಜವಾಬ್ದಾರಿಯಾಗಿದೆ.  ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಸಾಮಾಜಿಕ ಸಂರಚನೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ಬಹಳ ಕಷ್ಟಕರ ಕೆಲಸ ಎಂದು ಹೇಳಿದರು.

ಅಂತೆಯೇ ಭಾರತೀಯ ಸಂಸ್ಕೃತಿಗೆ ಕರ್ನಾಟಕವು ಕಲೆ, ವಾಸ್ತುಶಿಲ್ಪ, ಚಿತ್ರಕಲೆ ಇನ್ನೂ ಮೊದಲಾದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಗಳನ್ನು ನೀಡಿದೆ. ಇಂದು ಭಾರತದಲ್ಲಿ 700 ವಿಶ್ವವಿದ್ಯಾನಿಲಯಗಳಿವೆ. ಆದರೆ ಭಾರತ ಬಡತನ ಮುಕ್ತ ರಾಷ್ಟ್ರವಾಗಿಲ್ಲ ಎಂದು ವಿಷಾದಿಸಿದರು.

ವಸು ಮಳಲಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಅವರ ಬರವಣಿಗೆ ಕೂಡ ಅಷ್ಟೇ ವಿಭಿನ್ನವಾಗಿತ್ತು. ಅವರಿಗೆ ತಮ್ಮದೇ ಆದ ಆಲೋಚನಾ ಕ್ರಮ ಇತ್ತು. ಅವರು ಇತಿಹಾಸ ವಿಭಾಗದ ಉತ್ತಮ ವಿದ್ಯಾರ್ಥಿ ಮತ್ತು ಶಿಕ್ಷಕಿಯಾಗಿದ್ದರು. ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಹೊರತಂದಿದ್ದರು ಎಂದು ಸ್ಮರಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಜಾನಪದ ವಿದ್ವಾಂಸ ಮತ್ತು ನಿವೃತ್ತ ಕನ್ನಡ ಪ್ರಾಧ‍್ಯಾಪಕ ಪ್ರೊ.ರಾಮೇಗೌಡ , ಲಿಖಿತ ಮತ್ತು ಅಲಿಖಿತ ಆಧಾರಗಳ ಮೇಲೆ ಇತಿಹಾಸ ಮತ್ತು ಜಾನಪದವನ್ನು ಜೋಡಿಸುವ ಕಾರ್ಯವನ್ನು ವಸು ಮಳಲಿ ಅವರು ಮಾಡಿದ್ದರು. ಜಾನಪದ, ಇತಿಹಾಸ ಮತ್ತು ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಬಹುಮುಖ ಜ್ಞಾನ ಪ್ರತಿಭೆ ಅವರಲ್ಲಿತ್ತು. ಜಾನಪದ ಅಂಶಗಳಲ್ಲಿ ಯಾವುದನ್ನು ಸ್ವೀಕರಿಸಬೇಕು ಎಂಬ ಜಾಣ್ಮೆ ಅವರಿಗಿತ್ತು ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಪಾತ್ರರಾದ ಮಾಯಾ ಸಂಸ್ಥೆಯ ಸದಸ್ಯರು ಹಾಗೂ ಬೀದಿ ಮಕ್ಕಳಿಗೆ ಆಹಾರ ಮತ್ತು ಶಿಕ್ಷಣಕ್ಕೆ ಆಶ್ರಯದಾ ಮುರುಳಿ, ಸೇವಾ ತೆರಿಗೆ ಆಯುಕ್ತ ಜಿ.ನಾರಾಯಣಸ್ವಾಮಿ,  ಅವರ ಪತ್ನಿ ಪಾರ್ವತಿ ನಾರಾಯಣಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್,  ಡಿ.ಎನ್.ಲೋಕಪ್ಪ, ಕೆ.ರಘುರಾಂ ಮತ್ತಿತರರು ಭಾಗವಹಿಸಿದ್ದರು.

 

Leave a Reply

comments

Related Articles

error: