ಮೈಸೂರು

ವಿಪರೀತವಾಗಿ ಅಳುತ್ತಿದ್ದ ಎರಡು ವರ್ಷದ ಮಗುವನ್ನು ಹೊಡೆದು ಕೊಂದ ಪಾಲಕರು

ಮೈಸೂರು,ಜು.6:-    ವಿಪರೀತವಾಗಿ ಅಳುತ್ತಿದ್ದ ಎರಡು ವರ್ಷದ ಮಗುವನ್ನು ಪಾಲಕರೇ ಹೊಡೆದು ಕೊಂದ ಘಟನೆ ಹುಣಸೂರಿನಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಅಸ್ವಾಳು ಗ್ರಾಮದ ಕುಶಾಲ್​ (2) ಮೃತಪಟ್ಟ ಬಾಲಕನಾಗಿದ್ದಾನೆ. ಮೂಲತಃ ಎಚ್​.ಡಿ. ಕೋಟೆ ತಾಲೂಕಿನ ಸವ್ವೆ ಗ್ರಾಮದ ಶಶಿಕುಮಾರ್​ ಮತ್ತು ಪರಿಮಳಾ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಖುಷಿ(4) ಮತ್ತು ಕುಶಾಲ್​ ಎಂಬ ಇಬ್ಬರು ಮಕ್ಕಳಿದ್ದು, ಕುಶಾಲ್​ ಹುಟ್ಟಿದ ದಿನದಿಂದಲೂ ಈ ಮಗು ನನಗೆ ಹುಟ್ಟಿಲ್ಲ ಎಂದು ಶಶಿಕುಮಾರ್​ ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೇ ಆಗಾಗ ಮಗುವಿಗೆ ಹೊಡೆಯುತ್ತಿದ್ದ. ಗಂಡನಿಗೆ ಇಷ್ಟವಿಲ್ಲದ ಮಗು ತನಗೂ ಬೇಡ ಎಂದು ಪರಿಮಳಾ ಸಹ ಮಗುವಿಗೆ ಹೊಡೆಯುತ್ತಿದ್ದರು ಎನ್ನಲಾಗಿದೆ. ಆಗಾಗ ಮಗು  ವಿಪರೀತ ಅಳುತ್ತಿತ್ತು. ಮಗು ಅತ್ತಾಗಲೆಲ್ಲ ದಂಪತಿ ಮಗುವಿಗೆ ಚೆನ್ನಾಗಿ ಹೊಡೆಯುತ್ತಿದ್ದರು. ಜೂನ್​ 30 ರಂದು ರಾತ್ರಿ ಅಳುತ್ತಿದ್ದ ಮಗುವಿಗೆ ತಂದೆ-ತಾಯಿ ಇಬ್ಬರೂ ಹೊಡೆದಿದ್ದಾರೆ. ಥಳಿತಕ್ಕೊಳಗಾಗಿ ತೀವ್ರವಾಗಿ ಅಸ್ವಸ್ಥಗೊಂಡ ಮಗುವನ್ನು ದಂಪತಿ ಮೈಸೂರಿಗೆ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಜುಲೈ 3 ರ ಮಧ್ಯರಾತ್ರಿ ಕೊನೆಯುಸಿರೆಳೆದಿದೆ. ಮಗುವನ್ನು ಪಾಲಕರೇ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಬಿಳಿಕೆರೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: