ಮೈಸೂರು

ಶಾರದಾವಿಲಾಸ ವಿದ್ಯಾಸಂಸ್ಥೆಗಳ ಜೊತೆ ನಾಸ್ಕಾಮ್ ಸಹಭಾಗಿತ್ವ :  ಕೌಶಲ್ಯಗಳ ಹೊಸ ಶಿಕ್ಷಣ ಆರಂಭ

ಮೈಸೂರು, ಜು.6:- ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಆವರಣದಲ್ಲಿ ಇಂದು ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ತಯಾರು ಮಾಡಲು ಕೌಶಲ್ಯಗಳ ಹೊಸ ಶಿಕ್ಷಣವನ್ನು ಶಾರದಾ ವಿಲಾಸ ವಿದ್ಯಾಸಂಸ್ಥೆಗಳು ನಾಸ್ಕಾಮ್ (NASSCOM) ಒಪ್ಪಂದ ಮಾಡಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಪಾರ್ಥಸಾರಥಿಯವರು ಮಾತನಾಡಿ, ನಾಸ್ಕಾಮ್ ಸಂಸ್ಥೆಗಿನ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿ, ‘ವಿದ್ಯಾರ್ಥಿಗಳ ಉದ್ಯೋಗ-ಸನ್ನದ್ಧತೆಯನ್ನು ನಿರೂಪಿಸಲು ತೆಗೆದುಕೊಂಡ ಉಪಕ್ರಮಗಳು, ವಿದ್ಯಾರ್ಥಿಗಳ ರಾಷ್ಟ್ರೀಯ ಹಾಗೂ ಜಾಗತಿಕ ಚಲನಶೀಲತೆಯೊಂದಿಗೆ ಕೈಗಾರಿಕಾ ಕ್ಷೇತ್ರಗಳಲ್ಲಿ, ಔದ್ಯೋಗಿಕ ವಲಯಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುವುದೆಂದು ತಿಳಿಸಿದರು. ನಂತರ ಮುಂದುವರೆದು ಉದಯೋನ್ಮುಖ ಹೊಸ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿಭೆಯ ಕೊರತೆಯಿದ್ದು, ಈ ಪ್ರತಿಭೆಗಳನ್ನು ಗುರುತಿಸುವಲ್ಲಿ ನಾಸ್ಕಾಮ್ ಸಂಸ್ಥೆಯ ಸಹಭಾಗಿತ್ವ ಹೆಚ್ಚು ಉಪಯುಕ್ತವಾಗುತ್ತದೆಂದು ತಿಳಿಸಿದರು.

ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ವೃತ್ತಿಪರ ಭವಿಷ್ಯತ್ ಕೌಶಲಗಳನ್ನು ಒದಗಿಸುವ ಏಕೈಕ ಪ್ರಥಮ ಸಂಸ್ಥೆ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ನಾಸ್ಕಾಮ್‍ನ ಭವಿಷ್ಯದ ಕೌಶಲ್ಯಗಳು ಅಗ್ರಿಗೇಟರ್, ಐಟಿ-ಐಟೀಸ್ ಕೈಗಾರಿಕಾ ವಲಯಗಳಿಗೆ ವಿನ್ಯಾಸಗೊಳಿಸುವಲ್ಲಿ ಈ ಒಪ್ಪಂದದಿಂದ ಸಹಕಾರಿಯಾಗಲಿದೆ.

2020-21ನೇ ಶೈಕ್ಷಣಿಕ ಸಾಲಿನಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿಯೇ ಶಾರದಾ ವಿಲಾಸ ವಿದ್ಯಾಸಂಸ್ಥೆ ವೃತ್ತಿಪರ ಸ್ನಾತಕ ಪದವಿ (ಸಾಫ್ಟ್ ವೇರ್ ಡೆವಲಪ್‍ಮೆಂಟ್), ವೃತ್ತಿಪರ ಸ್ನಾತಕ ಪದವಿ (ಹೆಲ್ತ್ ಕೇರ್ ಮ್ಯಾನೇಜ್‍ಮೆಂಟ್), ಬಿ.ವೊಕ್ (ಹೆಚ್‍ಸಿಎಂ) ಮತ್ತು ಸ್ನಾತಕ ಪದವಿ (ಆನರ್ಸ್) ಡೇಟಾ ಸೈನ್ಸ್ ಮತ್ತು ತಾಂತ್ರಿಕ ಬುದ್ದಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜನ್ಸ್) ಎನ್ನುವ ಹೊಸ ಕೋರ್ಸ್‍ಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಅನುಮತಿಯೊಂದಿಗೆ ಪ್ರಾರಂಭಿಸಲಾಗುವುದೆಂದು ಪ್ರಕಟಿಸಿದರು. ನಾಸ್ಕಾಮ್‍ನ ಮುಖ್ಯಸ್ಥರಾದ ದಿನೇಶ್ ಪಣಿಗ್ರಾಹಿಯವರು ಮಾತನಾಡಿ, ಭಾರತೀಯ ಸಾಫ್ಟ್ ವೇರ್ ವಲಯದ ಪ್ರಾತಿನಿಧಿಕ ಸಂಸ್ಥೆಯಾದ ನಾಸ್ಕಾಮ್ ಭಾರತದ ಕೈಗಾರಿಕೆಗಳ ಪ್ರಧಾನ ವ್ಯಾಪಾರ ವಹಿವಾಟು ಸಂಸ್ಥೆ ಮತ್ತು ಐಟಿ-ಬಿಪಿಎಂ ಕೈಗಾರಿಕೆಗಳ ಚೇಂಬರ್ ಆಫ್ ಕಾಮರ್ಸ್ ಆಗಿದ್ದು, ಭಾರತದಲ್ಲಿ ಅಸ್ತಿತ್ವವನ್ನು ಹೊಂದಿರುವ ಭಾರತೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ 2800ಕ್ಕೂ ಹೆಚ್ಚು ಕಂಪನಿಗಳನ್ನು ಒಳಗೊಂಡಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಓದು ಮುಗಿಯುವ ಹಂತದಲ್ಲಿ ಉದ್ಯೋಗ ಲಭ್ಯವಾಗಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್, ಆಡಳಿತಾಧಿಕಾರಿ ಬಿ.ಕೆ.ಶ್ರೀನಿವಾಸ ರಾಘವನ್, ನಾಸ್ಕಾಮ್‍ನ ಪ್ರಾಂತೀಯ ಮುಖ್ಯಸ್ಥ ಸಯ್ಯದ್ ಅಹ್ಮದ್, ಶ್ರೀನಿವಾಸ ಅಯ್ಯಂಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ವೈ.ಕೆ.ಭಾಸ್ಕರ್, ಕೃಷ್ಣ, ಎಂ.ಬಿ.ಡೋಂಗ್ರೆ, ಪ್ರೊ.ಪಿ.ವಿ.ನರಹರಿ, ಮೋಹನ್‍ಮೂರ್ತಿ, ನಾಗರಾಜು ಹಾಗೂ ಇತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

 

Leave a Reply

comments

Related Articles

error: