ಪ್ರಮುಖ ಸುದ್ದಿಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ : ಪೌರಕಾರ್ಮಿಕರನ್ನು ಖಾಯಂಗೊಳಿಸುವ ಭರವಸೆ ನೀಡಿದ ಸಿಎಂ

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಬೂತಾಳೆ ಮೈದಾನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ  ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯದ ಎಲ್ಲಾ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸಲಾಗುವುದು. ಪೌರ ಕಾರ್ಮಿಕರ ವೇತನವನ್ನು ಈಗಾಗಲೇ 7 ಸಾವಿರದಿಂದ 14 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ ಮುಂತಾದ ಹಲವಾರು ವಿಶೇಷಣೆಗಳನ್ನು ಹೊಂದಿರುವ ಮೈಸೂರು ನಗರದ ಸೌಂದರ್ಯ ಹಾಗೂ  ಸ್ವಚ್ಛತೆ ಉಳಿಸಿಕೊಳ್ಳಲು ಹಾಗೂ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಮೈಸೂರಿಗೆ ಒದಗಿಸಲು ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ 950 ಕೋಟಿ ರೂ.ಗಳನ್ನು ಮೈಸೂರು ನಗರಕ್ಕೆ ನೀಡಿದೆ ಎಂದು ಹೇಳಿದರು.
ಮೈಸೂರಿಗೆ ಜಿಲ್ಲಾ ಆಸ್ಪತ್ರೆ ಕಟ್ಟಡ, ಟ್ರಾಮಾ ಸೆಂಟರ್, ಜಯದೇವ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಮಹಾರಾಣಿ ಕಾಲೇಜಿನಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಾರೆ. ಆ ಕಾಲೇಜಿಗೆ ಹೊಸದಾಗಿ ಕಟ್ಟಡ ಹಾಗೂ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದೇವೆ. 136 ಹಾಸಿಗೆಯ ಜಯದೇವ ಆಸ್ಪತ್ರೆ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ನಂತರ ಬೆಂಗಳೂರಿನಲ್ಲಿ ಸಿಗುತ್ತಿದ್ದ ವೈದ್ಯಕೀಯ ಸೌಲಭ್ಯ ಮೈಸೂರಿನ ಜನತೆಗೆ ಇಲ್ಲೇ ಸಿಗುತ್ತದೆ ಎಂದು ಹೇಳಿದರು.
ಮೈಸೂರಿಗೆ ಜಿಲ್ಲಾ ಆಸ್ಪತ್ರೆ ಇರಲಿಲ್ಲ. ಕಳೆದ ವರ್ಷ 500 ಹಾಸಿಗೆಗಳುಳ್ಳ ಜಿಲ್ಲಾ ಆಸ್ಪತ್ರೆಯನ್ನು ಮಂಜೂರು ಮಾಡಿದ್ದೇನೆ. ಇದರ ಜೊತೆಗೆ 700 ಕೋಟಿ ರೂ. ವೆಚ್ಚದಲ್ಲಿ ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಹ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ವತಿಯಿಂದ ವಿವಿಧ ಅಭಿವೃದ್ಧಿ ಕೈಗೊಳ್ಳಲು 350 ಕೋಟಿ ನೀಡಿದ್ದೇವೆ. ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅನುದಾನ ನೀಡಲಾಗುವುದು. ಮೈಸೂರಿಗೆ ಎರಡು ಬಾರಿ ಸ್ವಚ್ಛ ನಗರಿ ಗೌರವ ಸಿಗಲು ಜನರ ಸಹಕಾರ ಹಾಗೂ ಪೌರಕಾರ್ಮಿಕರ ಶ್ರಮ ಕಾರಣ. ಎಲ್ಲಾ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಎಲೆ ತೋಟದ ನಿವಾಸಿಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದೇನೆ. ಸ್ವಾಧೀನದಲ್ಲಿರುವವರಿಗೆ ಹಕ್ಕು ಪತ್ರ ನೀಡಲು ಕ್ರಮವಹಿಸಲಾಗುವುದು ಎಂದರು.
ಸೂಯೆಜ್ ಫಾರಂ ನಿಂದ ದುರ್ವಾಸನೆ ಬರುತ್ತಿದೆ. ಇದರ ನಿವಾರಣೆಗಾಗಿ ಮುಂದಿನ ಬಜೆಟ್‍ನಲ್ಲಿ ಅನುದಾನ ಒದಗಿಸಲಾಗುವುದು ಎಂದರು.

ಇದೇ ಸಂದರ್ಭ ಕೃಷ್ಣರಾಜ ಕ್ಷೇತ್ರದ ಶಾಸಕರನ್ನು ಶ್ಲಾಘಿಸಿದರು.ಇಲ್ಲಿನ ಶಾಸಕ ಎಂ.ಕೆ.ಸೋಮಶೇಖರ್ ರಾಜಕೀಯದಲ್ಲಿ ಡೋಂಗಿ ಕೆಲಸ ಮಾಡೊಲ್ಲ. ಅವರು ಎಂಎಲ್‌ಎ ಆಗಿ ಹಣ ಮಾಡಿಲ್ಲ. ಬದಲಿಗೆ ಶಾಸಕರಾದ ಮೇಲೆ ಹಣ ಕಳೆದುಕೊಂಡಿದ್ದಾರೆ. ನನ್ನ ಬಳಿ ಬಂದು ಅಭಿವೃದ್ಧಿ ಕೆಲಸಕ್ಕೆ ಮಂಜೂರಾತಿ ಕೊಡಿ ಅಂತ ಕೇಳುತ್ತಿರುತ್ತಾರೆ. ಜೊತೆಗೆ ಅಣ್ಣ ಸಾಲ ಮಾಡಿಕೊಂಡಿದ್ದೀನಿ ಅಣ್ಣ ಅಂತ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸೋಮಶೇಖರ್ ಅವರೇ ಈ ಕ್ಷೇತ್ರದ ಶಾಸಕರಾಗ್ತಾರೆ ಎಂದರು.
ಇದೇ ವೇಳೆ ಮಾಜಿ ಸಚಿವ ರಾಮದಾಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು ಇಲ್ಲಿ ಹಿಂದೆ ಇದ್ದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಅವರ ಅವಧಿಯಲ್ಲಿ ಏನು ಕೆಲಸ ಮಾಡಿದ್ದಾರೆ ಅಂತ ಗೊತ್ತಲ್ಲ ಎಂದು ವ್ಯಂಗ್ಯವಾಡಿದರಲ್ಲದೇ, ಸೋಮಶೇಖರ್ ಅವರಿಗೆ ಓಟು ಹಾಕಿ ಎಂದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ,ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರಾಗಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್,ಮಹಾಪೌರ ಎಂ.ಜೆ. ರವಿಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಿ. ಧ್ರುವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದರಾಜು, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷರಾದ ಹೆಚ್.ಎ. ವೆಂಕಟೇಶ್, ಮಹಾನಗರ ಪಾಲಿಕೆ ಉಪ ಮೇಯರ್ ರತ್ನ ಲಕ್ಷಣ್, ಜಿಲ್ಲಾಧಿಕಾರಿ ಡಿ. ರಂದೀಪ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: