ದೇಶಪ್ರಮುಖ ಸುದ್ದಿ

ಬಿಹಾರದಲ್ಲಿ ಮದ್ಯ ನಿಷೇಧದ ನಂತರ ಅಪರಾಧ ಕೃತ್ಯಗಳು ಇಳಿಮುಖ

ನವದೆಹಲಿ: ಬಿಹಾರದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೆ ತಂದ ನಂತರ ಅಪರಾಧ ಪ್ರಕರಣಗಳು ಇಳಿಮುಖವಾಗಿದೆ ಎಂದು ಬಿಹಾರ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮಾಹಿತಿ ಸಲ್ಲಿಸಿದೆ.

ಅಪಹರಣ, ಕೊಲೆ, ಡಕಾಯಿತಿ ಹಾಗೂ ಅತ್ಯಾಚಾರ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಪಾನ ನಿಷೇಧ ಜಾರಿಗೆ ಬಂದು ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ಅಪಹರಣ ಪ್ರಕರಣಗಳು ಶೇ.61.76ರಷ್ಟು ಇಳಿಕೆಯಾಗಿವೆ. ಕೊಲೆ ಪ್ರಕರಣಗಳು ಶೇ.28, ಡಕಾಯಿತಿ ಶೇ.23 ಹಾಗೂ ಅತ್ಯಾಚಾರ ಶೇ.10ರಷ್ಟು ಕಡಿಮೆಯಾಗಿವೆ. ಕಾರು ಹಾಗೂ ಟ್ರ್ಯಾಕ್ಟರ್ ಮಾರಾಟ ಶೇ.30ರಷ್ಟು ಏರಿಕೆ ಕಂಡಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಶೇ.11ರಷ್ಟು ಹೆಚ್ಚಳವಾಗಿದೆ ಎಂದು ಬಿಹಾರ ಸರ್ಕಾರ ವರದಿ ನೀಡಿದೆ.

ಮದ್ಯ ನಿಷೇಧವಾದ 2016ರ ಏಪ್ರಿಲ್‌ಗೂ ಮುನ್ನ 44 ಲಕ್ಷ ಬಿಹಾರಿಗಳು ಮದ್ಯ ಸೇವಿಸುತ್ತಿದ್ದರು. ಒಬ್ಬ ಮದ್ಯವ್ಯಸನಿ ವ್ಯಕ್ತಿ ತಿಂಗಳಿಗೆ ಒಂದು ಸಾವಿರ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸುತ್ತಿದ್ದ. ಮದ್ಯಪಾನ ನಿಷೇಧದಿಂದಾಗಿ ರಾಜ್ಯದ ಬೊಕ್ಕಸಕ್ಕೆ 5 ಸಾವಿರ ಕೋಟಿ ರೂ ಕೊರತೆ ಬಿದ್ದಿದೆ ಎಂದು ತಿಳಿಸಿದೆ.

Leave a Reply

comments

Related Articles

error: