ಮೈಸೂರು

ಸರ್ಕಾರಿ ಕೆಲಸಗಳನ್ನು ಅನುಷ್ಠಾನಗೊಳಿಸುವವರು ದೇಶಸೇವೆಗೆ ಬರಬೇಕು : ಡಿ.ರಂದೀಪ್ ಅಭಿಮತ

ದೇಶ ಸೇವೆಗೆ ಅತೀ ಬುದ್ದಿವಂತರು ಬೇಕಿಲ್ಲ. ದೇಶದ ಬಗ್ಗೆ ಅರಿವಿರುವ, ತಮ್ಮನ್ನು ಸಮಾಜ ಸೇವೆಗೆ ತೊಡಗಿಸಿಕೊಳ್ಳುವ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಮನಸ್ಸಿರುವ, ಸರ್ಕಾರಿ ಕೆಲಸಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವವರು ಬೇಕು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಅಭಿಪ್ರಾಯಪಟ್ಟರು.

ಸೋಮವಾರ ಜಿಲ್ಲಾಡಳಿತದ ವತಿಯಿಂದ  ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಒಂದು ದಿನದ ಯುಪಿಎಸ್‍ಸಿ ಕಾರ್ಯಾಗಾರವನ್ನು  ಡಿ.ರಂದೀಪ್ ಉದ್ಘಾಟಿಸಿದರು. ಬಳಿಕ  ಮಾತನಾಡಿದ ಅವರು, ನಿಮ್ಮ ಮುಂದೆ ಸಂಪನ್ಮೂಲ ವ್ಯಕ್ತಿಗಳಾಗಿ ಕುಳಿತಿರುವ ನಾವು ದೊಡ್ಡ ಸಾಧಕರಲ್ಲ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಮೇಲೆ ಬಂದವರು. ಸರಿಯಾದ ಮಾರ್ಗದರ್ಶನ, ಪೋಷಕರ ಬೆಂಬಲ, ಪರಿಶ್ರಮದಿಂದ ಇಂದು ಈ ಸ್ಥಾನದಲ್ಲಿದ್ದೇವೆ. 10 ವರ್ಷಗಳ ಹಿಂದೆ ನಾನೂ ಸಹ ಇದೇ ರೀತಿಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಸೂಕ್ತ ಮಾರ್ಗದಲ್ಲಿ ಅಧ್ಯಯನ ಮಾಡಿದರೆ ಯಾವ ಮಟ್ಟಕ್ಕಾದರೂ ಬೆಳೆಯಬಹುದು. ಪರೀಕ್ಷೆ 100 ಮೀ. ಓಟವಲ್ಲ. ಅದು ಬಹುದೂರ ಸಾಗುವ ಮ್ಯಾರಥಾನ್. ವರ್ಷಗಟ್ಟಲೆ ತಯಾರಿ ಮಾಡಿಕೊಳ್ಳಬೇಕು. ತಯಾರಿ ನಡೆಸದೆ ಪರೀಕ್ಷೆ ತೆಗೆದುಕೊಂಡು ಪ್ರಯತ್ನವನ್ನು ಹಾಳು ಮಾಡಿಕೊಳ್ಳಬಾರದು. ಪರೀಕ್ಷೆ ತೆಗೆದುಕೊಳ್ಳಲು 6 ಬಾರಿ ಅವಕಾಶವಿದ್ದು ಸತತವಾಗಿ ಪಯತ್ನಿಸಿ ಎಂದು ಸಲಹೆ ನೀಡಿದರು.

ಐಎಎಸ್, ಐಪಿಎಸ್ ಅಧಿಕಾರಿಗಳ ಆಯ್ಕೆಯಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ. ಯುಪಿಎಸ್‍ಸಿ ಸ್ವಾಯತ್ತ ಸಂಸ್ಥೆಯಾಗಿದ್ದು ಆಯ್ಕೆಯ ವಿಧಾನ ಪಾರದರ್ಶಕವಾಗಿರುತ್ತದೆ. ಯಾರೂ ಸಹ ಇದರಲ್ಲಿ ತಲೆ ಹಾಕುವುದಿಲ್ಲ. ಯುಪಿಎಸ್‍ಸಿ ಪರೀಕ್ಷೆ ವಿಶ್ವದ ಅತ್ಯಂತ ಕಷ್ಟಕರ ಪರೀಕ್ಷೆಯಾಗಿದ್ದು ಉತ್ತಮ ಸಿದ್ಧತೆ ಬಹಳ ಮುಖ್ಯ. ಪೂರ್ವ ತಯಾರಿ ಇಲ್ಲದೆ ಪರೀಕ್ಷೆ ಎದುರಿಸಬಾರದು. ಕೆಲವರು ಇಂಜಿನಿಯರಿಂಗ್, ಮೆಡಿಕಲ್ ಮಾಡಿರುವವರಿಗೆ ಸುಲಭ ಎಂದು ಹೇಳುತ್ತಾರೆ. ಆದರೆ, ಈ ಪರೀಕ್ಷೆ ಯಾರಿಗೂ ಸುಲಭವಲ್ಲ. ಕಲಾ, ವಾಣಿಜ್ಯ, ಸೇರಿದಂತೆ ಎಲ್ಲಾ ವಿಭಾಗದವರೂ ಪರೀಕ್ಷೆ ಎದುರಿಸಬಹುದು. ಯುಜಿಸಿಯಿಂದ ಮಾನ್ಯತೆ ಪಡೆದ ವಿವಿಯಿಂದ ಪದವಿ ಪಡೆದಿರಬೇಕು. ಚಿನ್ನದ ಪದಕವಾಗಲಿ, ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದಾಗಲಿ ಬೇಕಿಲ್ಲ. ಇಂದು ಮೀಸಲಾತಿ ಇಲ್ಲದಿದ್ದರು ಮಹಿಳೆಯರು ಮೊದಲ ರ್ಯಾಂಕ್ ಪಡೆಯುತ್ತಿರುವುದಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಸರ್ಕಾರಿ ಸೇವೆಯಲ್ಲಿ ಇದ್ದುಕೊಂಡೆ ಸಮಾಜ ಸೇವೆ ಮಾಡಬೇಕೆಂದೇನೂ ಇಲ್ಲ. ಆದರೆ ಸರ್ಕಾರಿ ಸೇವೆಯಲ್ಲಿದ್ದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವಿರುತ್ತದೆ. ನಾಗಾಲ್ಯಾಂಡ್‍ನಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ಆರ್ಮ್‍ಸ್ಟ್ರಾಂಗ್ ಎಂಬುವವರು ಸರ್ಕಾರದ ಅನುದಾನ ಬಳಿಸಿಕೊಳ್ಳದೆ ಸಾರ್ವಜನಿಕರ ಸಹಾಯಪಡೆದು 100 ಕಿ.ಮೀ ರಸ್ತೆಯನ್ನೇ ನಿರ್ಮಿಸಿದ್ದಾರೆ. ಅಂತಹ ಸೇವಾ ಮನೋಭಾವ ಸರ್ಕಾರಿ ಅಧಿಕಾರಿಯಾಗುವವರಲ್ಲಿ ಇರಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೆ ಇಂತಹ ಕಾರ್ಯಾಗಾರ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ಜಿಲ್ಲೆಯ ವೆಬ್‍ಸೈಟ್‍ನಲ್ಲಿ ಹೊಸ ಬ್ಲಾಗ್ ಆರಂಭಿಸಿ ಅದರಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಪರೀಕ್ಷೆಯ ಪಠ್ಯಕ್ರಮ, ಪೂರ್ವ ತಯಾರಿ, ಮಾನಸಿಕ ಸಾಮರ್ಥ್ಯ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಲಕ್ಷ್ಮಿ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮೊಹಮ್ಮದ್ ಸುಜಿತ, ಅರುಣಾಂಶು ಗಿರಿ, ಧಾರಕೇಶ್, ನೇಹಾ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: