ದೇಶಪ್ರಮುಖ ಸುದ್ದಿ

ತಮಿಳುನಾಡು ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: ಕೇಂದ್ರ

ಬೆಂಗಳೂರು: ಕೇಂದ್ರ ಸರ್ಕಾರವು ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂಬ ಹೇಳಿಕೆ ನೀಡಿದೆ.

ಹಂಗಾಮಿ ಮುಖ್ಯಮಂತ್ರಿಯಾಗಿರುವ ಪನ್ನೀರ್ ಸೆಲ್ವಂ ಜಾಗಕ್ಕೆ ನೂತನ ಮುಖ್ಯಮಂತ್ರಿ ನೇಮಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ ನಡೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಉತ್ತರಿಸುತ್ತಿದ್ದರು.

“ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ತಮ್ಮ ಸಂವಿಧಾನಾತ್ಮಕವಾಗಿ ನಿಷ್ಪಕ್ಷಪಾತ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಅಲ್ಲಿ ಖಾಲಿ ಇಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿಯೇ ಸರ್ಕಾರ ನಡೆಯುತ್ತಿದೆ. ಪನ್ನೀರ್ ಸೆಲ್ವಂ ಅವರು ರಾಜಿನಾಮೆ ಸಲ್ಲಿಸಿರುವುದಕ್ಕೆ ಬಿಜೆಪಿ ಕಾರಣವಲ್ಲ. ಜಯಲಲಿತಾ ಅವರು ಇದ್ದಾಗಲೇ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ತಮಿಳುನಾಡು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯತ್ವವನ್ನು ಹೊಂದಿಲ್ಲ. ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡುವ ಉದ್ದೇಶವೂ ನಮಗಿಲ್ಲ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ನಮಗಿಷ್ಟವಿಲ್ಲ” ಎಂದರು.

ಎಐಎಡಿಎಂಕೆ ನಾಯಕರೇ ಇದ್ದಕ್ಕಿದ್ದಂತೆ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಇದಕ್ಕೆ ಏನು ಕಾರಣ ಎಂದು ಹೇಳಲು ನಾನು ಪನ್ನೀರ್ ಸೆಲ್ವಂ ಅವರ ಪರ ವಕೀಲನಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸ್ತುತ ತಮಿಳುನಾಡು ರಾಜ್ಯಪಾಲರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಸಂವಿಧಾನಾತ್ಮಕವಾಗಿ ಅವರ ಕರ್ತವ್ಯವವನ್ನು ನಿಭಾಯಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಈಗಲು ಸರ್ಕಾರ ಸ್ಥಿರವಾಗಿದೆ” ಎನ್ನುವ ಮೂಲಕ ಶಶಿಕಲಾ ಮುಖ್ಯಮಂತ್ರಿ ಹುದ್ದೆಗೇರುವುದು ಅಷ್ಟು ಸುಲಭವಲ್ಲ ಎಂಬ ಸುಳಿವು ನೀಡಿದ್ದಾರೆ.

Leave a Reply

comments

Related Articles

error: