ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಇ-ಹಾಸ್ಪಿಟಲ್ ಸೌಲಭ್ಯ ವಿಸ್ತರಣೆ; ಸಮಯ ಉಳಿಸಲು ರೋಗಿಗಳ ಮಾಹಿತಿ ಸಂಗ್ರಹ

ಬೆಂಗಳೂರು: ರಾಜ್ಯದ 47 ಸರ್ಕಾರಿ ಆಸ್ಪತ್ರೆಗಳನ್ನು ಕೇಂದ್ರ ಸರ್ಕಾರದ ಆನ್‍’ಲೈನ್‍ ರಿಜಿಸ್ಟರ್‍ ವ್ಯವಸ್ಥೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಇರುವ ಆರೋಗ್ಯ ಸಮಸ್ಯೆಗಳ ವಿವರಗಳನ್ನು ಆನ್‍’ಲೈನ್‍ನಲ್ಲಿ ಸಂಗ್ರಹಿಸಿಡುವುದರಿಂದ ಪದೇ ಪದೇ ರೋಗಿಗಳ ಪರೀಕ್ಷೆ ನಡೆಸುವುದು ಅಗತ್ಯವಿಲ್ಲ. ಈ ಹಿಂದೆ ಚಿಕಿತ್ಸೆ ಪಡೆದ ವಿವರಗಳು ಅಥವಾ ರೋಗಿಗೆ ಇರುವ ತೊಂದರೆಗಳ ಮಾಹಿತಿ ಸಂಗ್ರಹಿಸಿಟ್ಟು ಬೇಕೆಂದಾಗ ಕಂಪ್ಯೂಟರ್‍ನಲ್ಲಿ ನೋಡುವ ಅವಕಾಶ ಈ ವ್ಯವಸ್ಥೆಯಿಂದ ಜಾರಿಗೆ ಬರಲಿದ್ದು, ವೈದ್ಯರ ಸಮಯ ರೋಗಿಯ ಹಣ ಎರಡನ್ನೂ ಉಳಿಸಬಹುದಾಗಿದೆ.

ಮಾರ್ಚ್ 31 ರಿಂದ ಕರ್ನಾಟಕ ರಾಜ್ಯದ 47 ಸರ್ಕಾರಿ ಆಸ್ಪತ್ರೆಗಳು ಕೇಂದ್ರ ಸರ್ಕಾರದ ಆನ್’ಲೈನ್ ರಿಜಿಸ್ಟರ್ ವ್ಯವಸ್ಥೆಗೆ ಒಳಪಡಲಿವೆ. ಈಗ ನಿಮ್ಹಾನ್ಸ್, ಸಂವಾದ ವಾಕ್ ಮತ್ತು ಶ್ರವಣ ಸಂಸ್ಥೆ ಹಾಗೂ ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆ. ರೋಗಿಯ ನೋಂದಣಿ ಸಂಖ್ಯೆಯ ಜೊತೆಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಿಸಲಾಗುತ್ತದೆ. ಇದರಿಂದ ಆನ್‍ಲೈನ್‍ ರಿಜಿಸ್ಟರ್ ವ್ಯವಸ್ಥೆ ಹೊಂದಿರುವ ದೇಶದ ಯಾವುದೇ ಆಸ್ಪತ್ರೆಗೆ ಹೋದರೂ ರೋಗಿಯ ಕಾಯಿಲೆ, ಚಿಕಿತ್ಸೆ ವಿವರಗಳು ಲಭ್ಯವಾಗಲಿವೆ.

ರಾಜ್ಯದ 47 ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲ ಹಂತವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ರೋಗಿಯ ಆರೈಕೆ, ಪ್ರಯೋಗಾಲಯ ಸೇವೆ, ವೈದ್ಯಕೀಯ ದಾಖಲೆಗಳ ಸಮಗ್ರ ನಿರ್ವಹಣೆಯನ್ನು ಕ್ರೋಡೀಕರಿಸಿ ಮಾಹಿತಿ ನೀಡಲಾಗುತ್ತದೆ. ರೋಗಿಯ ಸಮಗ್ರ ಡೇಟಾ ಸಂಗ್ರಹಿಸುವುದರಿಂದ ನಿಖರ, ವಾಸ್ತವ, ಮಾಹಿತಿ, ಮೇಲ್ವಿಚಾರಣೆ, ಯೋಜನಾ ನಿರ್ವಹಣೆ, ಸಂಶೋಧನೆಗೆ ಹೆಚ್ಚು ಅನುಕೂಲವಾಗಲಿದೆ.

ಇ-ಹಾಸ್ಪಿಟಲ್ ನಿಖರ ಚಿಕಿತ್ಸೆ ನೀಡಲು ನೆರವಾಗುತ್ತದೆ. ರೋಗಿಯ ಸಮಗ್ರ ಮಾಹಿತಿ ಕಂಪ್ಯೂಟರೀಕರಣಗೊಳ್ಳುತ್ತದೆ. ಅನಗತ್ಯ ವೈದ್ಯಕೀಯ ಪರೀಕ್ಷೆಗಳಿಗೆ ಕಡಿವಾಣ ಬೀಳುತ್ತದೆ. ರೋಗಿಗೆ ಯಾವ ರೀತಿಯ ಚಿಕಿತ್ಸೆ ಅವಶ್ಯಕತೆ ಇದೆ ಎಂಬುದನ್ನು ನುರಿತ ವೈದ್ಯರು ನಿರ್ಧರಿಸುತ್ತಾರೆ, ಅದರಂತೆ ರೋಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಹೊರ ರೋಗಿ ಈ ಹಿಂದೆ ಚಿಕಿತ್ಸೆ ಪಡೆದ ಕಾರ್ಡ್‍ ಅಥವಾ ದಾಖಲಾತಿ ವಿವರ ಮರೆತು ಬಂದಿದ್ದರೂ ಇ-ಹಾಸ್ಪಿಟಲ್ ಸಾಫ್ಟ್​ವೇರ್ ಮೂಲಕ ಮಾಹಿತಿ ಪಡೆಯಬಹುದು. ಪ್ರಾಥಮಿಕ ಹಂತದಿಂದ ತೃತೀಯ ಹಂತದ ಚಿಕಿತ್ಸಾ ಕೇಂದ್ರಗಳಿಗೆ ಹೋದರೂ ಎಲ್ಲಿ ಯಾವ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಯಬಹುದು. ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ 21 ಜಿಲ್ಲೆಗಳ 2 ಮೆಡಿಕಲ್ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆಗೆ ಬರುತ್ತದೆ. 2018ರ ಒಳಗೆ ರಾಜ್ಯದ ಎಲ್ಲ 144 ತಾಲೂಕುಗಳಲ್ಲಿಯೂ ಈ ಸೌಲಭ್ಯ ಸಿಗಲಿದೆ.

Leave a Reply

comments

Related Articles

error: