ಮೈಸೂರು

ಕರಾಮುವಿಯಲ್ಲಿ ವ್ಯಾಸಂಗ ಮಾಡಿದ 11 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪತ್ರ- ಅಂಕಪಟ್ಟಿ ನೀಡುವಂತೆ ಹೈಕೋರ್ಟ್ ಆದೇಶ

ಮೈಸೂರು,ಜು.13:- ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವ್ಯಾಸಂಗ ಮಾಡಿದ 11 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪತ್ರ (ಪ್ರಾವಿಷನ್‌ ಡಿಗ್ರಿ ಸರ್ಟಿಫಿಕೇಟ್‌) ಹಾಗೂ ಅಂಕಪಟ್ಟಿ ನೀಡುವಂತೆ ಕೆಎಸ್‌ಒಯುಗೆ ಹೈಕೋರ್ಟ್‌ ಆದೇಶ ನೀಡಿದ ಹಿನ್ನೆಲೆಯಲ್ಲಿ  ಅವರಿಗೆ ಮಾತ್ರ ಅಂಕಪಟ್ಟಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.

ಶನಿವಾರ ಕರ್ನಾಟಕ ರಾಜ್ಯ ಮುಕ್ತ ವಿವಿ. ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ಅಧ್ಯಕ್ಷತೆಯಲ್ಲಿ ವಿಶೇಷ ಶೈಕ್ಷಣಿಕ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಕೋರ್ಟ್ ಆದೇಶದ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವ್ಯಾಸಂಗ ಮಾಡಿದ 11 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪತ್ರ (ಪ್ರಾವಿಷನ್‌ ಡಿಗ್ರಿ ಸರ್ಟಿಫಿಕೇಟ್‌) ಹಾಗೂ ಅಂಕಪಟ್ಟಿ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇದೇ ಮಾನದಂಡವನ್ನು ಉಳಿದ 95 ಸಾವಿರ ವಿದ್ಯಾರ್ಥಿಗಳಿಗೂ ಅನ್ವಯಗೊಳಿಸಲು ಸಾಧ್ಯವೆ ಎಂಬ ನಿಟ್ಟಿನಲ್ಲಿ ಚರ್ಚಿಸಲಾಗಿದೆ. ಆದರೆ ಕಾನೂನು ತಜ್ಞರ ಸಲಹೆ ಪ್ರಕಾರ ಸಾಧ್ಯವಿಲ್ಲ. ಕಾರಣ, ಕೋರ್ಟ್, ಅರ್ಜಿದಾರರನ್ನು ಉಲ್ಲೇಖಿಸಿ ಅವರಿಗೆ ತಾತ್ಕಾಲಿಕ ಪದವಿ ಪತ್ರ (ಪ್ರಾವಿಷನ್‌ ಡಿಗ್ರಿ ಸರ್ಟಿಫಿಕೇಟ್‌) ಹಾಗೂ ಅಂಕಪಟ್ಟಿ ನೀಡುವಂತೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಯಾರು ನ್ಯಾಯಾಲಯದಲ್ಲಿ ಆದೇಶ ತಂದಿದ್ದಾರೋ ಅಥವಾ ತರುತ್ತಾರೋ ಅಂಥವರಿಗೆ ತಾತ್ಕಾಲಿಕ ಪದವಿ ಪತ್ರ ಹಾಗೂ ಅಂಕಪಟ್ಟಿಯನ್ನು ಕೆಎಸ್ಒಯು ನೀಡಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: